ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕು ಲಕ್ಕವ್ವನಹಳ್ಳಿ ಬಿಎಂಸಿ ಹಾಲು ಸಂಗ್ರಹಣ ಕೇಂದ್ರದಲ್ಲಿ ಸುಮಾರು 250 ಲೀಟರ್ನಷ್ಟು ಹಾಲನ್ನು 3.5 ಡಿಗ್ರಿ ಫ್ಯಾಟ್ ಬರಲಿಲ್ಲ ಎಂದು ವಾಪಸ್ ಕಳುಹಿಸಿದ್ದರು. ರಾತ್ರಿ ವೇಳೆ ಏನು ಮಾಡುವುದು ಎಂದು ತಿಳಿಯದೆ ರೈತರು ಹಾಲನ್ನು ಚರಂಡಿಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ ಇರುವುದರಿಂದ ಹಾಲು ಮಾರಾಟವಾಗದೆ ಉಳಿದಿರುವುದರಿಂದ ಕೆಎಂಎಫ್ ನವರು ರೈತರಿಂದ ಖರೀದಿಸುವ ಹಾಲಿನ ಡಿಗ್ರಿ 3.5 ಗಿಂತ ಕಡಿಮೆ ಇದೆ ಎಂದು ವಾಪಸ್ ಕಳಿಸುತ್ತಿದ್ದಾರೆ. ಅತಿಯಾದ ಬಿಸಿಲಿನಿಂದ ಹಸುಗಳ ದೇಹದಲ್ಲಿ ಫ್ಯಾಟ್ ಅಂಶ ಕಡಿಮೆಯಾಗುತ್ತದೆ. ಇದೇ ಒಂದು ಕಾರಣ ಮುಂದಿಟ್ಟುಕೊಂಡು ಕೆಎಂಎಫ್ ನವರು ಈಗಾಗಲೇ ಸಂಕಷ್ಟದಲ್ಲಿ ಇರುವ ರೈತರ ಗಾಯದ ಮೇಲೆ ಬರೆ ಹಾಕುತ್ತಿದ್ದಾರೆ.