ಚಿತ್ರದುರ್ಗ: ವಿಶೇಷ ಪೂಜೆಗಳ ಮೂಲಕ ಧನ ಪ್ರಾಪ್ತಿಯಾಗುತ್ತದೆ, ಉದ್ಯೋಗ ದೊರಕುತ್ತದೆ ಎಂದು ಮಹಿಳೆಯರಿಗೆ ಆಮಿಷ ಒಡ್ಡಿ ಬಂಗಾರದ ಒಡವೆ, ಹಣ ಪಡೆದು ಪರಾರಿಯಾಗಿದ್ದ ಮೂವರು ಕಪಟ ಜ್ಯೋತಿಷಿಗಳು ಈಗ ಜೈಲುಪಾಲಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ಎಸ್.ಆರ್ ರಸ್ತೆ ನಿವಾಸಿಯೊಬ್ಬರಿಗೆ ನಿಮ್ಮ ಮನೆಯಲ್ಲಿ ಸಂಪತ್ತು, ಐಶ್ವರ್ಯ ಹೆಚ್ಚಾಗಬೇಕಾದರೆ, ನೀವು ದೀರ್ಘಕಾಲ ಕೋಟ್ಯಂತರ ರೂಪಾಯಿ ಆಸ್ತಿ ಒಡೆಯರಾಗಿ ಬಾಳಬೇಕಾದರೆ, ನಿಮ್ಮ ಮನೆಯಲ್ಲಿನ ಬಂಗಾರದ ಆಭರಣಗಳನ್ನು ಇಟ್ಟು ದೇವಿಯನ್ನು ಪೂಜಿಸಿದರೆ ನಿಮ್ಮ ಕೆಲಸ ಕಾರ್ಯಗಳು ನಿರ್ವಿಜ್ಞಾನವಾಗಿ ನಡೆಯುತ್ತವೆ. ನೀವು ಸಹ ಯಾವುದೇ ಸಮಸ್ಯೆಯಿಲ್ಲದೆ ಜೀವಿಸಬಹುದು ಎಂಬ ಆಸೆ ತೋರಿಸಿ ಅವರಿಂದ ಸುಮಾರು 6.80 ಲಕ್ಷ ಮೌಲ್ಯದ 170 ಗ್ರಾಂ ಬಂಗಾರದ ನೆಕ್ಲೇಸ್, ಕಿವಿ ಓಲೆ, ಮೂರು ಚೈನ್ ಮುಂತಾದವುಗಳನ್ನು ಸೆಪ್ಟೆಂಬರ್ 8ರಂದು ಅವರಿಂದ ಪಡೆದುಕೊಂಡಿದ್ದರು.
ಪೂಜೆ ಸಲ್ಲಿಸಿ ಎಲ್ಲ ಅನುಗ್ರಹವಾಗುತ್ತೆ
ಶೀಘ್ರದಲ್ಲೇ ಪೂಜೆ ಸಲ್ಲಿಸಿ ನಿಮಗೆ ವಾಪಸ್ ನೀಡಿದ ನಂತರ ನಿಮಗೆ ಎಲ್ಲಾ ರೀತಿಯಲ್ಲಿ ಅನುಗ್ರಹವಾಗುತ್ತವೆ ಎಂದು ದೂರವಾಣಿಯಲ್ಲೇ ಸುಳ್ಳು ಹೇಳಿ ಅವರಿಗೆ ಭರವಸೆ ಮೂಡಿಸಿ ಚಳ್ಳಕೆರೆಗೆ ಆಗಮಿಸಿ ಬಂಗಾರದ ಆಭರಣಗಳನ್ನು ತೆಗೆದುಕೊಂಡು ನಾಪತ್ತೆಯಾಗಿದ್ದರು.
ಈ ಬಗ್ಗೆ ಆರೋಪಿಗಳ ಮೋಸದ ಬಗ್ಗೆ ಜಾಗೃತಗೊಂಡ ಮೋಸಕ್ಕೊಳಗಾದ ವ್ಯಕ್ತಿ ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕಾ, ಉಪವಿಭಾಗದ ಡಿವೈಎಸ್ಪಿ ಕೆ.ವಿ.ಶ್ರೀಧರ್ ಮಾರ್ಗದರ್ಶನದಲ್ಲಿ ಠಾಣಾ ಇನ್ಸ್‍ಪೆಕ್ಟರ್ ಜೆ.ಎಸ್.ತಿಪ್ಪೇಸ್ವಾಮಿ, ಪಿಎಸ್‍ಐ ಎ.ಎಸ್.ಮಹೇಶ್‍ಗೌಡ ಮತ್ತು ಸಿಬ್ಬಂದಿ ವರ್ಗ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಹಳೇ ಹುಬ್ಬಳಿಯ ಕುಮಾರ ಪಾರ್ಕ್ ನಿವಾಸಿಗಳಾದ ಬಂಡೆಪ್ಪ ಹನುಮಂತಪ್ಪ ವಾಸ್ಟರ್(58), ಭೀಮರಾವ್ ಬಂಡೆಪ್ಪ ವಾಸ್ಟರ್(24), ಇಳಕಲ್‍ನ ಗಣೇಶ್‍ಶಾಸ್ತ್ರಿ(24) ಆರೋಪಗಳನ್ನು ವಶಕ್ಕೆ ಪಡೆದಿದ್ದಾರೆ.
ಬೇರೆಯವರಿಂದಲೂ ಹಣ ಕಿತ್ತ ಭೂಪ
ಈ ಬಗ್ಗೆ ವಿಚಾರಣೆ ನಡೆಸಿದಾಗ ಚಳ್ಳಕೆರೆಯ ವ್ಯಕ್ತಿಯಿಂದ ಬಂಗಾರದ ಆಭರಣಗಳನ್ನು ಪಡೆದಿದ್ದಲ್ಲದೆ, ಬೇರೆ -ಬೇರೆ ಯುವತಿಯರಿಗೆ ಐಎಎಸ್, ಐಪಿಎಸ್ ಹುದ್ದೆ ಸಿಗುವ ಪೂಜೆ ಮಾಡುವ ಆಮಿಷ ಒಡ್ಡಿ ಅವರಿಂದಲೂ ಸಹ ಹಣ ಪಡೆದಿರುವುದು ಗೊತ್ತಾಗಿದೆ. ಅಷ್ಟೇ ಅಲ್ಲದೆ ಅಶ್ಲೀಲ ಫೋಟೋಗಳನ್ನೂ ಆರೋಪಿಗಳು ಪಡೆದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದೇ ರೀತಿಯಲ್ಲಿ ಯಾರಾದರೂ ಆಮಿಷ ಒಡ್ಡಲು ಕರೆ ಮಾಡಿದರೆ, ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಮೂವರು ಆರೋಪಿಗಳು ಕಂಪ್ಯೂಟರ್ ಬಳಕೆಯಲ್ಲಿ ನಿಪುಣರಿದ್ದು ಫೇಸ್‍ಬುಕ್, ಇನ್ಸ್ಟಾಗ್ರಾಂ, ವಾಟ್ಸ್ಆ್ಯಪ್ನಲ್ಲಿ ಭವಿಷ್ಯ ಮತ್ತು ಶಾಸ್ತ್ರ ಹೇಳುವ ನೆಪ ಒಡ್ಡಿ ಗ್ರಾಹಕರನ್ನು ಆಕರ್ಷಿಸಿ ಮೋಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ:ತುಮಕೂರು: ಅತ್ಯಾಚಾರ-ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಇಬ್ಬರು ಅರೆಸ್ಟ್