ಚಿತ್ರದುರ್ಗ:ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವು ಮುಸ್ಲಿಂ ಗೂಂಡಾಗಳಿಂದ ನಡೆದ ದುಷ್ಕೃತ್ಯವಾಗಿದೆ. ಮಾನಸಿಕ ಸ್ಥಿತಿಯನ್ನು ಅವರು ಬದಲಾವಣೆ ಮಾಡಿಕೊಂಡಿಲ್ಲ. ಪ್ರವೀಣ್ ಒಬ್ಬನೇ ಇದ್ದಾಗ ಹೇಡಿಗಳ ರೀತಿ ಹತ್ಯೆ ಮಾಡಿ ಓಡಿ ಹೋಗಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ರೀತಿ ಶಿವಮೊಗ್ಗದಲ್ಲಿ ಹರ್ಷನ ಹತ್ಯೆ ನಡೆದಿತ್ತು. ಮುಸ್ಲಿಂ ಸಮುದಾಯದ ಹಿರಿಯರು ಗುಂಡಾಗಳಿಗೆ ತಿಳಿ ಹೇಳಬೇಕು. ಇಡೀ ರಾಜ್ಯದ ಶಾಂತಿ, ವ್ಯವಸ್ಥೆ ಹಾಳು ಮಾಡುತ್ತಿದ್ದಾರೆ ಎಂದು ಹೇಳಿದರು.
ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿ ಮಾಡಿದ್ದೇನೆ. ಶಾಂತಿಪ್ರಿಯ ಕರ್ನಾಟಕ ರಾಜ್ಯದಲ್ಲಿ ಕಗ್ಗೊಲೆಗಳ ತಡೆಗೆ ಸೂಕ್ತ ಕ್ರಮದ ಬಗ್ಗೆ ಚಿಂತನೆ ನಡೆಯುತ್ತಿದೆ. ಕೊಲೆ ಮಾಡದಂತೆ ಯಾವ ರೀತಿ ಭಯ ಇರಬೇಕು ಎಂಬ ಬಗ್ಗೆ ಆಲೋಚಿಸಲಾಗುತ್ತಿದೆ. ಕೊಲೆಗೆ ಕೊಲೆಯೇ ಉತ್ತರ ಅಲ್ಲ, ಹಿಂದೂ ಸಮಾಜ ದುರ್ಬಲ ಅಂತನೂ ಅಲ್ಲ. ಹಿಂದೂ ಸಮಾಜದ ಶಕ್ತಿಯನ್ನು ದುರುಪಯೋಗ ಮಾಡಿಕೊಂಡು ನಿರಪರಾಧಿ ಹುಡುಗರ ಕೊಲೆ ಆಗುತ್ತಿದೆ ಎಂದರು.
ಪ್ರವೀಣ್ ನೆಟ್ಟಾರು ಕೊಲೆ ಘಟನೆಯನ್ನು ಇಡೀ ರಾಜ್ಯ ದೇಶ ಗಮನಿಸುತ್ತಿದೆ. ಸಿಎಂ, ಪ್ರಧಾನಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಲ್ಲಿ ಪ್ರಾರ್ಥನೆ. ಇದೇ ಕೊಲೆ ಕೊನೆ ಆಗಬೇಕು. ರಾಜ್ಯದಲ್ಲಿ ಮತ್ತೊಂದು ಕೊಲೆ ಆಗಬಾರದು. ಈ ನಿಟ್ಟಿನಲ್ಲಿ ತುರ್ತಾಗಿ ಕಾನೂನು ರಚನೆ ಆಗಬೇಕು. ಕೊಲೆಗಾರರು ಯಾರೆಂದು ಪತ್ತೆ ಹಚ್ಚಬೇಕು. ಕೊಲೆ ಹಿಂದೆ ಯಾವ ರಾಷ್ಟ್ರದ್ರೋಹಿ ಸಂಘಟನೆ ಇದೆ ಎಂಬುವದನ್ನು ಪತ್ತೆ ಹಚ್ಚಬೇಕೆಂದು ಆಗ್ರಹಿಸಿದರು.
ಹಿಂದೂ ಸಮಾಜ ಹೊಡೆತ ಕೊಟ್ಟರೆ ರಕ್ತದೋಕಳಿ:ಪ್ರವೀಣ್ ಕೊಲೆಯ ಬಗ್ಗೆ ರಾಜ್ಯದ ಜನ, ಹಿಂದೂ ಸಮಾಜಕ್ಕೆ ಆಕ್ರೋಶವಿದೆ. ನಮ್ಮ ಕಾರ್ಯಕರ್ತರನ್ನು ಕಳೆದುಕೊಳ್ಳುತ್ತಿದ್ದೇವೆ. ಬಿಜೆಪಿ ಸರ್ಕಾರ ಇದ್ದಾಗ್ಯೂ ಕಾರ್ಯಕರ್ತರ ರಕ್ಷಣೆಯಲ್ಲಿ ಯಶಸ್ವಿ ಆಗಿಲ್ಲ. ಈ ಬಗ್ಗೆ ನಾಯಕರು, ರಾಜ್ಯಕ್ಕೆ ನೋವಿದೆ ಎಂದು ಈಶ್ವರಪ್ಪ ಹೇಳಿದರು.