ಚಿತ್ರದುರ್ಗ :ಕೇಂದ್ರ ಸರ್ಕಾರ ರೈತರ ಹಿತದೃಷ್ಟಿಯಿಂದ ಎಪಿಎಂಸಿ ಕಾಯ್ದೆ, ಎಂಎಸ್ಪಿ ಕಾನೂನು ಜಾರಿ ಮಾಡಿದೆ. ಮುಕ್ತ ಮಾರುಕಟ್ಟೆ ಜೊತೆಗೆ ಆದಾಯ ಹೆಚ್ಚಾಗಿಲಿದೆ. ಆದ್ರೆ, ರೈತ ಮುಖವಾಡ ಧರಿಸಿದ ರೈತರ ವಿರೋಧಿಗಳು ಈ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ ಕಿಡಿ ಕಾರಿದರು.
ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಮನೆಗೆ ಭೇಟಿ ನೀಡಿ ಬಳಿಕ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರಿಗಾಗಿ ಜಾರಿ ಮಾಡಿದ ಕಾನೂನುಗಳ ವಿರುದ್ಧ ರೈತರನ್ನ ಎತ್ತಿಕಟ್ಟುವ ಕಾರ್ಯಕ್ಕೆ ವಿರೋಧಿ ಬಣಗಳು ಮುಂದಾಗುತ್ತಿವೆ. ರೈತ ಬೆಳೆದ ಬೆಳೆ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ್ರೆ ನಷ್ಟವಾಗುತ್ತಿದೆ ಎಂದು ಕೆಲವರು ರೈತರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು.
ಕೋವಿಡ್ ಸಂದರ್ಭದಲ್ಲಿ ಶೇ.40ರಷ್ಟು ಹೆಚ್ಚಿಗೆ ರಾಸಾಯನಿಕ ಗೊಬ್ಬರ ಮಾರಾಟವಾಗಿದೆ. ರಾಸಾಯನಿಕ ಗೊಬ್ಬರ ಸಬ್ಸಿಡಿಗೆ ಪ್ರಧಾನಿಗಳು 65 ಸಾವಿರ ಕೋಟಿ ಹಣ ನೀಡಿದ್ದಾರೆ. ಬಿಜೆಪಿ ಸರ್ಕಾರ ಕೃಷಿಕರ ಪರವಾಗಿದೆ ಎನ್ನೋದಕ್ಕೆ ಇನ್ನೆಷ್ಟು ಪುರಾವೆಗಳು ಬೇಕು ಎಂದು ಪ್ರಶ್ನಿಸಿದರು.