ಚಿತ್ರದುರ್ಗ: ಅಭಿವೃದ್ಧಿ ಇಲ್ಲದೆ ಬೆಂಗಾಡಾಗಿದ್ದ ಚಿತ್ರದುರ್ಗ ನಗರ ಇದೀಗ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದ್ದು, ಹಲವು ಕಾಮಗಾರಿಗಳಿಂದ ಇಡೀ ನಗರ ಧೂಳಿನಿಂದ ಕೂಡಿದೆ.
ಕಾಮಗಾರಿಗಳಿಂದ 'ಧೂಳು'ಮಯವಾದ ಚಿತ್ರದುರ್ಗ ಕೋಟೆಗಳ ನಾಡು ಚಿತ್ರದುರ್ಗ ನಗರದಲ್ಲಿ ಸದ್ಯ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ನಗರದಲ್ಲಿ ಹಾದು ಹೋಗಿರುವ ಬೆಂಗಳೂರು-ದಾವಣಗೆರೆ ರಸ್ತೆ ಬಹು ವರ್ಷಗಳ ಬಳಿಕ ಕಾಂಕ್ರೀಟ್ ಕಾಣುತ್ತಿದೆ. ಆದರೆ ಕಾಮಗಾರಿಯಿಂದ ಇಡೀ ನಗರದ ರಸ್ತೆಗಳು ಧೂಳಿನಿಂದ ಕೂಡಿದೆ. ಚಳ್ಳಕೆರೆ ಟೋಲ್ ಗೇಟ್ ನಿಂದ ಹಿಡಿದು ಶಾಸಕ ತಿಪ್ಪಾರೆಡ್ಡಿಯವರ ಮನೆ ತನಕ ಧೂಳೋ ಧೂಳು. ಇದರಿಂದ ವಾಹನ ಸವಾರರಿಗೆ ಕಿರಿ ಕಿರಿ ಎನ್ನಿಸುತ್ತಿದೆ.
ಬಸ್, ಲಾರಿ ಹಾಗೂ ಇತರೆ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಿದರೆ ಧೂಳು ಮಾತ್ರ ಹೆಚ್ಚು ಕಾಣಸಿಗುತ್ತದೆ. ಇದರಿಂದ ದ್ವಿ ಚಕ್ರ ಹಾಗು ತ್ರಿಚಕ್ರ ವಾಹನಗಳಿಗೆ ದಿನ ನಿತ್ಯ ಕಿರಿ ಕಿರಿಯಾಗುತ್ತಿದ್ದು, ಅಸ್ತಮಾ ರೋಗಕ್ಕೆ ಎಡೆಮಾಡಿಕೊಟ್ಟಿದೆ. ಸುಮಾರು 26 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ಮಾಡಲಾಗುತ್ತಿದ್ದು, ಚಳ್ಳಕೆರೆ ಟೋಲ್ ನಿಂದ ಪ್ರವಾಸಿ ಮಂದಿರ ತನಕ ಈ ರಸ್ತೆ ಅಗಲೀಕರಣ ಕೈಗೊಳ್ಳಲಾಗಿದೆ. ಈ ಬಿಡಿ ರಸ್ತೆ ಅಗಲೀಕರಣ ಕೈಗೆತ್ತಿಕೊಂಡು ವರ್ಷಗಳೇ ಉರುಳಿದರೂ ಈ ರಸ್ತೆ ಕಾಮಗಾರಿ ಮುಗಿಯದೆ ಇರುವುದರಿಂದ ಗುತ್ತಿಗೆದಾರನಿಗೆ ಸ್ಥಳೀಯರು ಹಿಡಿ ಶಾಪ ಹಾಕುತ್ತಿದ್ದಾರೆ.
ಇನ್ನು ಇದೇ ಮಾರ್ಗದಲ್ಲಿ ಎದುರಾಗುವ ನಗರ ಪೊಲೀಸ್ ಠಾಣೆಗೆ ಧೂಳು ಅಂಟಿಕೊಂಡಿದ್ದು, ಇದೀಗ ಠಾಣೆ ತನ್ನ ಅಂದವನ್ನು ಕಳೆದುಕೊಂಡಿದೆ. ಒಟ್ಟಾರೆ ಬಹು ವರ್ಷಗಳ ಬಳಿಕ ರಸ್ತೆ ಕಾಂಕ್ರೀಟ್ ಕಾಣುತ್ತಿದ್ದರಿಂದ ನಗರದ ಕೆಲ ಜನ ಸಂತಸ ವ್ಯಕ್ತಪಡಿಸಿದರೆ, ಇನ್ನು ಕೆಲ ವಾಹನ ಸವಾರರು ಧೂಳಿಗೆ ರೋಸಿ ಹೋಗಿದ್ದಾರೆ.