ಚಿತ್ರದುರ್ಗ: ಕರ್ನಾಟಕ ರಾಜ್ಯದ ಒಂದು ಹಳ್ಳಿ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿ ವಿಚಾರದಲ್ಲಿ ಬಹಳಷ್ಟು ಹಿಂದುಳಿದಿರುವ ಜಿಲ್ಲೆಯಾಗಿದೆ. ಇದೀಗ ನಗರದ ಮುಖ್ಯ ರಸ್ತೆ ಅಭಿವೃದ್ಧಿ ಕಾಣುತ್ತಿದ್ದು, ರಸ್ತೆ ಅಗಲೀಕರಣದಲ್ಲಿ ಬಡವರ ಕಟ್ಟಡಗಳನ್ನು ಒಡೆಯುತ್ತಿದ್ದು, ಶ್ರೀಮಂತರ ಕಟ್ಟಡ ರಕ್ಷಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ನಗರದ ಬಿಡಿ ರಸ್ತೆ ಹಲವು ವರ್ಷಗಳ ಬಳಿಕ 18 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಣುತ್ತಿದೆ. ರಸ್ತೆ ಅಗಲೀಕರಣ ಮಾಡುವ ನೆಪದಲ್ಲಿ ಕಟ್ಟಡಗಳನ್ನು ಒಡೆಯುವ ವಿಷಯದಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 60 ಅಡಿ ಅಗಲದ ರಸ್ತೆಯಲ್ಲಿ ಎದುರಾಗುವ ಕೆಲ ಶ್ರೀಮಂತರ ಕಟ್ಟಡಗಳನ್ನು ಅಧಿಕಾರಿಗಳು ಉಳಿಸುವ ಪ್ರಯತ್ನ ಮಾಡುತ್ತಿದ್ದು, ರಸ್ತೆಯ ಇಕ್ಕೆಲಗಳಲ್ಲಿರುವ ಕೆಲ ಮಧ್ಯಮ ವರ್ಗದ ಜನರ ಕಟ್ಟಡಗಳನ್ನು ಅಧಿಕಾರಿಗಳು ಮುಲಾಜಿಲ್ಲದೇ ಒಡೆಯಲು ಮಾರ್ಕ್ ಮಾಡಿದ್ದಾರೆ.
ಇನ್ನು ಚಿತ್ರದುರ್ಗ ನಗರದ ಚಳ್ಳಕೆರೆ ಟೋಲ್ಗೇಟ್ನಿಂದ ಆರಂಭವಾಗಿರುವ ಈ ರಸ್ತೆ ಕಾಮಗಾರಿಯಲ್ಲಿ ಎದುರಾಗುವ ಪಂಚಾಕ್ಷರಿ ಕಲ್ಯಾಣ ಮಂಟಪ, ತರಳುಬಾಳು ಮಠಕ್ಕೆ ಸೇರಿದ ಶಾಲೆಗಳ ಮುಂಭಾಗವನ್ನು ಒಡೆಯಲು ಮಾರ್ಕ್ ಮಾಡಲಾಗಿತ್ತು. ಆದ್ರೇ ಇದೀಗ ಅ ಮಾರ್ಕ್ ಅನ್ನು ಅಳಿಸಿ ಹಾಕಲಾಗಿದ್ದು, ಕಟ್ಟಡಗಳನ್ನು ಒಡೆಯದೇ ಹಾಗೇ ರಕ್ಷಿಸಲಾಗಿದೆ.