ಕರ್ನಾಟಕ

karnataka

ETV Bharat / state

ಆಮೆಗತಿಯಲ್ಲಿ ಸಾಗುತ್ತಿದೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ: ಕಾರಣ? - chitradurga

ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳು ಸೇರಿದಂತೆ ಹಲವು ಜಿಲ್ಲೆಗಳಿಗೆ ಮಹತ್ವಾಕಾಂಕ್ಷೆ ನೀರಾವರಿ ಯೋಜನೆ. ಕಳೆದ 13 ವರ್ಷಗಳಿಂದ ಆಮೆಗತಿಯಲ್ಲಿ ಕಾಲುವೆ ನಿರ್ಮಾಣದ ಕಾಮಗಾರಿ ಸಾಗುತ್ತಿದೆ. ಯೋಜನೆಗೆ ಅಗತ್ಯ ಭೂ ಸ್ವಾಧೀನ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

upper bhadra project
ಆಮೆಗತಿಯಲ್ಲಿ ಸಾಗುತ್ತಿದೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ..

By

Published : Mar 11, 2021, 8:41 AM IST

ಚಿತ್ರದುರ್ಗ: ಬಯಲು ಸೀಮೆಯ ಕನಸಿನ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಆರಂಭಗೊಂಡು ಬರೋಬ್ಬರಿ 13 ವರ್ಷಗಳು ಕಳೆದರೂ ಇದುವರೆಗೆ ಪೂರ್ಣಗೊಂಡಿಲ್ಲ. ಭದ್ರಾ ಕಾಲುವೆ ನೀರು‌ ಹರಿಯುವಿಗಾಗಿ ಬಯಲು ಸೀಮೆಯ ಜನತೆ ಚಾತಕಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ.

ಆಮೆಗತಿಯಲ್ಲಿ ಸಾಗುತ್ತಿದೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ..

ಹೌದು, ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳು ಸೇರಿದಂತೆ ಹಲವು ಜಿಲ್ಲೆಗಳಿಗೆ ಮಹತ್ವಾಕಾಂಕ್ಷೆ ನೀರಾವರಿ ಯೋಜನೆ. ಕಳೆದ 13 ವರ್ಷಗಳಿಂದ ಆಮೆಗತಿಯಲ್ಲಿ ಕಾಲುವೆ ನಿರ್ಮಾಣದ ಕಾಮಗಾರಿ ಸಾಗುತ್ತಿದೆ. ಯೋಜನೆಗೆ ಅಗತ್ಯ ಭೂ ಸ್ವಾಧೀನ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಫಾರೆಸ್ಟ್ ಕ್ಲಿಯರೆನ್ಸ್, ಭೂಸ್ವಾಧೀನ ಹಾಗೂ ಕಂದಾಯ ತೊಡಕುಗಳೇ ಯೋಜನೆ ಮಂದಗತಿಗೆ ಕಾರಣ ಎಂದು ಸಂಸದ ಎ. ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಇತ್ತ‌ ಜಿಲ್ಲೆಯಲ್ಲಿ 780 ಎಕರೆ ಭೂ ಮಂಜೂರಾತಿ ಪ್ರಕ್ರಿಯೆ ನಡೆದಿಲ್ಲವಂತೆ, ಕೆಲವು ತಾಂತ್ರಿಕ ತೊಡಕುಗಳಿಂದ ಹಿನ್ನೆಡೆ ಉಂಟಾಗುತ್ತಿದೆ‌ ಎನ್ನಲಾಗುತ್ತಿದೆ. ಭೂಸ್ವಾಧೀನಕ್ಕೆ ರೆವಿನ್ಯೂ ಇಲಾಖೆ ಸಾಥ್ ನೀಡುತ್ತಿಲ್ಲ ಎಂದು ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.

ಈವರೆಗೆ ನಡೆದ ಕಾಮಗಾರಿ ಎಷ್ಟು?:

ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಕೊರೊನಾ ವೈರಸ್ ಭೀತಿ ಬಳಿಕ ಮಂದಗತಿಯಲ್ಲಿ ಸಾಗುತ್ತಿದೆ ಎಂಬ ಆರೋಪಗಳು ರೈತರಿಂದ ಪದೆ ಪದೇ ಕೇಳಿ ಬರುತ್ತಿದೆ. ಕಳೆದ 13 ವರ್ಷಗಳ ಹಿಂದೆ ಆರಂಭಗೊಂಡ ಕಾಮಗಾರಿ ಇದುವರೆಗೂ ಕೇವಲ ಶೇ 40 ರಷ್ಟು ಮಾತ್ರ ನಡೆದಿದೆ. ಇನ್ನುಳಿದ ಕಾಮಗಾರಿ ಪೂರ್ಣಗೊಳ್ಳಲು ಇನ್ನೆಷ್ಟು ವರ್ಷಗಳು ಕಾಯಬೇಕು ಎಂದು ರೈತ ಮುಖಂಡರು ಪ್ರಶ್ನಿಸುತ್ತಿದ್ದಾರೆ.

ರಾಷ್ಟ್ರೀಯ ಮನ್ನಣೆ ಉಪಯೋಗವೇನು?:

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಘೋಷಣೆಯ ಪ್ರಸ್ತಾವ ಈಗಾಗಲೇ ಕೇಂದದ್ರ ಅಂಗಳದಲ್ಲಿದೆ. ಕೇಂದ್ರದ 10ಕ್ಕೂ ಅಧಿಕ ಇಲಾಖೆಗಳು ಕ್ಲಿಯರೆನ್ಸ್ ನೀಡಿವೆ ಎನ್ನಲಾಗುತ್ತಿದೆ. ಅಧಿಕೃತವಾಗಿ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಎಂದು ಘೋಷಣೆಯಾದರೆ, ಯೋಜನೆಯ ಶೇ 90ರಷ್ಟು ಭಾಗ ಅನುದಾನವನ್ನು ಕೇಂದ್ರ ಸರ್ಕಾರ ಒದಗಿಸುತ್ತದೆ. ಒಟ್ಟು 21,000 ಕೋಟಿ ಅನುದಾನ ಕೇಂದ್ರ ನೀಡುತ್ತದೆ. ಯೋಜನೆ ಪೂರ್ಣಗೊಳಿಸಿ ಬಯಲು ಸೀಮೆಯ ನಾಡಿನ ಕೆರೆಗಳನ್ನು ತುಂಬಿಸುವುದಲ್ಲದೇ, ಭದ್ರಾ ಮೇಲ್ದಂಡೆ ಯೋಜನೆಯಿಂದ 05 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಒದಗಿಸಲು ಗುರಿ ಹೊಂದಲಾಗಿದೆ ಎಂದು ಸಂಸದ ಎ. ನಾರಾಯಣಸ್ವಾಮಿ ಹೇಳಿದ್ದಾರೆ.

ಅಧಿಕಾರಿಗಳಿಂದ ಕಾಮಗಾರಿ ಕುಂಠಿತವಾಗುತ್ತಿದೆಯಾ?:

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿರುವ ಬಗ್ಗೆ ಸಂಸದ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 13 ವರ್ಷ ಗತಿಸಿದರೂ, ಕಾಲುವೆ ನಿರ್ಮಾಣಕ್ಕೆ ವೇಗವಿಲ್ಲ. ಅದಕ್ಕೆ ಕಾರಣ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ. ಕೇಂದ್ರ ಸರ್ಕಾರ ಭದ್ರಾಗೆ ರಾಷ್ಟೀಯ ನೀರಾವರಿ ಯೋಜನೆ ಎಂದು ಘೋಷಣೆ ಬಳಿಕ 21 ಸಾವಿರ ಕೋಟಿ ಅನುದಾನ ಬಿಡುಗಡೆಯಾಗುತ್ತದೆ. ಆಗ ಅಧಿಕಾರಿಗಳಿಗೆ ಕೆಲಸದ ಒತ್ತಡ ಹೆಚ್ಚುತ್ತದೆ. ಅಧಿಕಾರಿಗಳು ಸಮಗ್ರ ಯೋಜನೆಯ ಕಡೆ ಗಮನಹರಿಸಿ ಕೆಲಸ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.

ಯೋಜನೆಗೆ ಬಿಡುಗಡೆಗೊಂಡ ಹಣವೆಷ್ಟು?:

ಮಹತ್ವಕಾಂಕ್ಷೆ ಭದ್ರಾ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ಈಗಾಗಲೇ 5 ಸಾವಿರ ಕೋಟಿಗೂ ಅಧಿಕ ಹಣ ಬಿಡುಗಡೆ ಮಾಡಲಾಗಿದೆ. ಇದುವರೆಗೂ ಕಾಮಗಾರಿಗೆ 4 ಸಾವಿರ ಕೋಟಿ ಅನುದಾನ ಖರ್ಚು ಮಾಡಲಾಗಿದೆ. ಆದ್ರೆ ಕಾಮಗಾರಿಗೆ ವೇಗವಿಲ್ಲ, ಭೂ ಸ್ವಾಧೀನ ಪಡಿಸಿಕೊಂಡ ಕೆಲವು ರೈತರಿಗೆ ಇದುವರೆಗೂ ಹಣ ನೀಡಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಅನ್ನದಾತರ ಒತ್ತಾಯವೇನು?:

ಭದ್ರಾ ಕಾಮಗಾರಿ ಪ್ರಗತಿ ಸ್ಥಳದಲ್ಲಿ 60 ಅಡಿ ಆಳದವರೆಗೂ ಸುರಂಗ ಕೊರೆದ ಪರಿಣಾಮ ಅಂತರ್ಜಲ ಮಟ್ಟ ಕುಸಿಯುತ್ತಿದೆ ಎಂದು ಕೃಷಿಕರು ಆರೋಪಿಸಿದ್ದಾರೆ. ಬೇಸಿಗೆ ಆರಂಭಕ್ಕೂ ಮುನ್ನ ಅಂತರ್ಜಲ ಮಟ್ಟ ಕುಸಿದರೆ ಕಾಮಗಾರಿ ನಡೆಯುವ ಸುತ್ತಮುತ್ತಲಿನ ಗ್ರಾಮಸ್ಥರು ನೀರಿಗಾಗಿ ಹಾಹಾಕಾರ ಪಡಬೇಕಾಗುತ್ತದೆ. ಇತ್ತ ಕೃಷಿ ಚಟುವಟಿಕೆ ಸರ್ಕಾರ ಪರ್ಯಾಯವಾಗಿ ಕೆರೆ ತುಂಬಿಸುವ ಒತ್ತಾಯದ ಕೂಗು ರೈತರಲ್ಲಿದೆ. ಅಲ್ಲದೆ ಯೋಜನೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಬಯಲು ಸೀಮೆಯ ನಾಡಿನ ಜನತೆಯ ಕನಸು ನನಸು ಮಾಡುವಂತೆ ಒತ್ತಾಯಿಸಿದ್ದಾರೆ.

ABOUT THE AUTHOR

...view details