ಚಿತ್ರದುರ್ಗ:ರಾಜ್ಯದಲ್ಲಿ ಸಕಾಲಕ್ಕೆ ಚಿಕಿತ್ಸೆ, ಆಕ್ಸಿಜನ್ ಲಭ್ಯವಾಗದೆ ಜನರು ಸಾವನ್ನಪ್ಪುತ್ತಿರುವ ಪ್ರಕರಣಗಳು ಮುಂದುವರೆದಿವೆ. ಆಕ್ಸಿಜನ್ ಸಿಗದೆ 75 ವರ್ಷದ ವೃದ್ಧ ಮೃತಪಟ್ಟಿರುವ ಘಟನೆ ಜಿಲ್ಲೆಯ ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಹಿರಿಯೂರು ತಾಲೂಕಿನ ಕಾಟನಾಯಕನಹಳ್ಳಿ ಗ್ರಾಮದ ರಾಮಪ್ಪ (75) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ರಾಮಪ್ಪರನ್ನು ಮಧ್ಯರಾತ್ರಿ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಚಿಕಿತ್ಸೆ ಫಲಕಾರಿಯಾಗದೆ ವೃದ್ಧ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ಶವದ ಪಕ್ಕ ನಿಂತು ವಿಡಿಯೋ ಮಾಡಿ ಮೊಮ್ಮಗಳ ಆಕ್ರೋಶ ಮೃತರ ಸಂಬಂಧಿಗಳು ಆಸ್ಪತ್ರೆ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಶವದ ಬಳಿ ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ಫುಲ್ ವೈರಲ್ ಆಗಿದೆ. ಶಾಸಕರು, ಸಂಸದರು, 108 ಚಾಲಕರು ಸೇರಿದಂತೆ ಅನೇಕರಿಗೆ ಕರೆ ಮಾಡಿದರೂ, ಯಾರೂ ಸಹಾಯ ಮಾಡಲಿಲ್ಲ. ಆಸ್ಪತ್ರೆಯಲ್ಲಿ 5 ನಿಮಿಷ ಮಾತ್ರ ಆಕ್ಸಿಜನ್ ಕೊಡುತ್ತೇವೆಂದು ಹೇಳುತ್ತಾರೆ. ರಾತ್ರಿ ವೇಳೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂತಾ ಉಡಾಫೆ ಉತ್ತರ ನೀಡ್ತಾರೆಂದು ಮೃತರ ಮೊಮ್ಮಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದರಿಂದ ಒಂದು ವೇಳೆ ನಮಗೂ ಸಹ ಪಾಸಿಟಿವ್ ಬಂದರೆ ನಮ್ಮ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ನಮ್ಮ ತಾತನಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಹೆಚ್.ಡಿ ಕೋಟೆಯಲ್ಲಿ ಕೊರೊನಾ ಸೋಂಕಿತನ ಮೇಲೆ ಕಲ್ಲೆಸೆತ