ಅಥಣಿ(ಬೆಳಗಾವಿ): ಕೊರೊನಾ ವೈರಸ್ ಅಬ್ಬರ ಪ್ರತೀ ಕ್ಷಣವೂ ಆತಂಕ ಮೂಡಿಸುತ್ತಿದೆ. ಇಂದು ಡಿಸಿಎಂ ಲಕ್ಷ್ಮಣ ಸವದಿ ತಾಲೂಕು ಆಡಳಿತದ ಜೊತೆ ಸಭೆ ನಡೆಸಿ ಕೊರೊನಾ ನಿಯಂತ್ರಣ ಸಂಬಂಧ ಚರ್ಚಿಸಿದ್ದಾರೆ.
ಅಥಣಿ ಸಂಪೂರ್ಣ ಲಾಕ್ಡೌನ್ಗೆ ಡಿಸಿಎಂ ಲಕ್ಷ್ಮಣ ಸವದಿ ಸುಳಿವು
ಅಥಣಿ ತಾಲೂಕಿನಲ್ಲಿ ಗಂಟೆ ಗಂಟೆಗೆ ಏರುತ್ತಿರುವ ಕೊರೊನಾ ಪ್ರಕರಣಗಳ ನಿಯಂತ್ರಣಕ್ಕಾಗಿ ತಾಲೂಕನ್ನು ಲಾಕ್ಡೌನ್ ಮಾಡುವ ಸುಳಿವನ್ನು ಡಿಸಿಎಂ ಲಕ್ಷ್ಮಣ ಸವದಿ ನೀಡಿದ್ದಾರೆ.
ಕೊರೊನಾ ವೈರಸ್ ಹರಡುವಿಕೆ ನಿಯಂತ್ರಿಸಲು ಜೂಲೈ 20ರವರೆಗೆ ಅಥಣಿ ಪಟ್ಟಣದಲ್ಲಿ ವ್ಯಾಪಾರಸ್ಥರ ಸಂಘ ಸ್ವಯಂ ಘೋಷಿತ ಲಾಕ್ಡೌನ್ ಮಾಡಲು ನಿರ್ಧರಿಸಿದೆ. ಇದು ಒಳ್ಳೆಯ ನಿರ್ಧಾರ. ಜಿಲ್ಲಾ ಮಟ್ಟದಲ್ಲಿ ಕೊರೊನಾ ಸೋಂಕು ಪರೀಕ್ಷೆ ನಡೆಯುತ್ತಿರುವುದರಿಂದ ವಿಳಂಬವಾಗುತ್ತದೆ. ಇದರಿಂದಾಗಿ ಅಥಣಿಯಲ್ಲೇ ಪರೀಕ್ಷೆ ಮಾಡಲು ಸೌಲಭ್ಯ ಕಲ್ಪಿಸಲಾಗಿದೆ. ಸೋಂಕಿತರಿಗೆ ಚಿಕಿತ್ಸೆ ನೀಡಲು 30 ಹಾಸಿಗೆಯ ಕೊರೊನಾ ವಾರ್ಡ್ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಅಥಣಿ ಪಟ್ಟಣವನ್ನು ಸ್ವಯಂಪ್ರೇರಿತ ಬಂದ್ ಮಾಡಿರುವ ವಿಚಾರ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಜೊತೆಗೆ ಅಥಣಿಯನ್ನು ಸಂಪೂರ್ಣ ಲಾಕ್ಡೌನ್ ಮಾಡಲು ತಿಳಿಸಿದ್ದೇನೆ. ಮುಖ್ಯಮಂತ್ರಿಗಳು ಕೂಡ ಪ್ರತಿಕ್ರಿಯೆ ನೀಡಿ ಆಯಾ ಜಿಲ್ಲಾ ಅಧಿಕಾರಿಗಳ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಬೇಕಾಗಿ ಸೂಚಿಸಿದ್ದಾರೆ ಎನ್ನುವ ಮೂಲಕ ಶೀಘ್ರ ಅಥಣಿಯನ್ನು ಸಂಪೂರ್ಣ ಲಾಕ್ಡೌನ್ ಮಾಡುವ ಸುಳಿವು ನೀಡಿದರು.