ಚಿತ್ರದುರ್ಗ: ಕೇಂದ್ರ ಸಚಿವ ಸದಾನಂದಗೌಡ ಅವರು ಶುಗರ್ ಲೋ ಆಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಚಿತ್ರದುರ್ಗ ನಗರದಲ್ಲಿ ನಡೆದಿದೆ.
ಡಿವಿಎಸ್ ಅವರ ಆರೋಗ್ಯದಲ್ಲಿ ಚೇತರಿಕೆ ಈ ಸಂಬಂಧ ಶಾಸಕ ತಿಪ್ಪಾರೆಡ್ಡಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಶುಗರ್ ಕಡಿಮೆಯಾದ ಕಾರಣ ಅಸ್ವಸ್ಥಗೊಂಡಿದ್ದರು. ಹಾಗಾಗಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ಸದ್ಯ ಚೇತರಿಸಿಕೊಂಡಿದ್ದಾರೆ. ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ ಎಂದರು.
ಬಸವೇಶ್ವರ ಆಸ್ಪತ್ರೆಯ ವೈದ್ಯ ಡಾ. ಅಭಿಷೇಕ್ ಮಾತನಾಡಿ, ಡಿವಿಎಸ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಎಲ್ಲರ ಜೊತೆಗೆ ಮಾತನಾಡುತ್ತಿದ್ದಾರೆ. ಜ್ಯೂಸ್ ಸೇವಿಸಿದ್ದಾರೆ. ಸದ್ಯ ಆತಂಕಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಓದಿ:ಕೇಂದ್ರ ಸಚಿವ ಸದಾನಂದಗೌಡ ಅಸ್ವಸ್ಥ: ಝೀರೋ ಟ್ರಾಫಿಕ್ ಮೂಲಕ ಹೆಬ್ಬಾಳದ ಆಸ್ಟರ್ ಆಸ್ಪತ್ರೆಗೆ ಶಿಫ್ಟ್
ಬಿಜೆಪಿ ಪಕ್ಷದ ಕಾರ್ಯಕಾರಣಿ ಸಭೆ ಮುಗಿಸಿಕೊಂಡು ಚಿತ್ರದುರ್ಗ ನಗರಕ್ಕೆ ಇಂದು ಮಧ್ಯಾಹ್ನ ಡಿವಿಎಸ್ ಆಗಮಿಸಿದ್ದರು. ಬಳಿಕ ಖಾಸಗಿ ಹೋಟೆಲ್ಗೆ ಬಂದ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದರು ಎನ್ನಲಾಗುತ್ತಿದೆ. ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹಾಗೂ ಕಾರ್ಯಕರ್ತರು ಸ್ಥಳೀಯ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೇಂದ್ರ ಸಚಿವ ಡಿವಿಎಸ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ ಹಾಗೂ ಸಚಿವ ಈಶ್ವರಪ್ಪ, ಶಾಸಕ ತಿಪ್ಪಾರೆಡ್ಡಿಯವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಜಿರೋ ಟ್ರಾಫಿಕ್ ಮೂಲಕ ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.