ಚಿತ್ರದುರ್ಗ:ಬರಗಾಲದ ವೇಳೆಯಲ್ಲಿ ಗ್ರಾಮೀಣ ಭಾಗದ ಜನ್ರು ಗುಳೆ ಹೋಗದೇ ಇರಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನ ಜಾರಿಗೆತಂದಿದೆ.
ಆ ಮೂಲಕ ಗ್ರಾಮೀಣ ಪ್ರದೇಶದ ದುಡಿಯುವ ಕೈಗಳಿಗೆ ಕೆಲಸ ಕೊಟ್ಟು ಅಗತ್ಯ ಕಾಮಗಾರಿಗಳನ್ನ ನಡೆಸಲು ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಆದರೆ ಯೋಜನೆಯನ್ನ ಸಮರ್ಪಕವಾಗಿ ನಿರ್ವಹಿಸಬೇಕಾದ ಅಧಿಕಾರಿಗಳೆ ಕೋಟಿಗಟ್ಟಲೆ ಹಣವನ್ನು ಗುಳುಂ ಮಾಡಲು ಸಜ್ಜಾಗಿದ್ದರು ಎಂಬ ಆರೋಪ ಚಿತ್ರದುರ್ಗದಲ್ಲಿ ಕೇಳಿ ಬಂದಿದೆ.
ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಚಾರ ಆರೋಪ ಕೇಳಿ ಬಂದಿದೆ ಚಿತ್ರದುರ್ಗ ಜಿಲ್ಲೆಯು ಕಳೆದ ಹಲವಾರು ವರ್ಷಗಳಿಂದ ತೀವ್ರ ಬರಗಾಲಕ್ಕೆ ಸಿಲುಕಿದ್ದು, ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಕಾಲಕಾಲಕ್ಕೆ ಮಳೆ, ಬೆಳೆಯಾಗದ ಕಾರಣ ರೈತರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಕೂಲಿಗಾಗಿ ಗುಳೆ ಹೋಗುತ್ತಿದ್ದಾರೆ. ಇದನ್ನ ತಪ್ಪಿಸುವ ಸಲುವಾಗಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ರೈತರಿಗೆ ಅನುಕೂಲವಾಗುವಂತಹ ಚೆಕ್ ಡ್ಯಾಂ ನಿರ್ಮಾಣ, ನಮ್ಮ ಹೊಲ ನಮ್ಮ ರಸ್ತೆ, ಕೆರೆ ಹೂಳೆತ್ತುವ ಕಾಮಗಾರಿ ಸೇರಿದಂತೆ ವಿವಿಧ ರೀತಿಯ ಕಾಮಗಾರಿಗಳನ್ನ ಸ್ಥಳೀಯ ಕೂಲಿ ಕಾರ್ಮಿಕರಿಂದಲೇ ಕೆಲಸ ಮಾಡಿಸುವ ಮೂಲಕ ದುಡಿಯುವ ಕೈಗಳಿಗೆ ಕೆಲಸ ಕೂಲಿ ಕೊಡುತ್ತಿದೆ.
ಆದ್ರೆ ಜಿಲ್ಲಾ ಪಂಚಾಯಿತಿಯಲ್ಲಿ 2018-19ರಲ್ಲಿ ಸುಮಾರು 120 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದ 3558 ಕಾಮಗಾರಿಗಳಿಗೆ ಮೇಲಾಧಿಕಾರಿಗಳಿಂದ ಅನುಮೋದನೆ ಪಡೆಯದೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕಾಮಗಾರಿಗಳನ್ನ ನಡೆಸಿ ಹಣ ಪಾವತಿಸುವಂತೆ ತಾಲೂಕು ಮಟ್ಟದ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರು. ಈ ಕಾಮಗಾರಿಗಳ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತಂಡಗಳನ್ನ ರಚಿಸಿ ಅವರ ಮೂಲಕ ವಿಚಾರಣೆ ನಡೆಸಿದ ಸಿಇಒ, ಗುಣಮಟ್ಟದಿಂದ ಕೂಡಿದ 3304 ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿದ್ದು, ಕಾಮಗಾರಿಗಳನ್ನೇ ನಡೆಸದೆ ಹಣ ಬಿಡುಗಡೆ ಮಾಡಲು ಕೋರಿದ್ದ 254 ನಕಲಿ ಕಾಮಗಾರಿಗಳಿಗೆ ಹಣ ಮಂಜೂರು ಮಾಡದಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು.
ನಕಲಿ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿ ಲೆಕ್ಕ ಪರಿಶೋಧನೆಯಲ್ಲೂ ದಾಖಲೆಗಳು ಲಭ್ಯವಾಗದ ಕಾರಣ ಈ ಬಗ್ಗೆ ಸಿಇಒ ಅವರೇ ಕ್ರಮ ತೆಗೆದುಕೊಳ್ಳುವಂತೆ ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಸೂಚನೆ ನೀಡಲಾಗಿತ್ತು. ಆದರೆ ನಕಲಿ ಕಾಮಗಾರಿಗಳಿಗೆ ಹಣ ಮಂಜೂರು ಮಾಡಲು ಪ್ರಸ್ತಾವನೆ ಕಳುಹಿಸಿದ್ದ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ಹಾಗೂ ಚಳ್ಳಕೆರೆ ಇಒಗಳಿಗೆ ಕೇವಲ ಕಾರಣ ಕೇಳಿ ನೋಟಿಸ್ ನೀಡಿರುವ ಸಿಇಒ ಸತ್ಯಭಾಮ, ಬಿಲ್ ಮಾತ್ರ ತಡೆಹಿದಿದ್ದು, ಸರ್ಕಾರಕ್ಕೆ ವಂಚಿಸಲು ಸಜ್ಜಾಗಿದ್ದ ಅಧಿಕಾರಿಗಳ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸಿಲ್ಲ. ಆದರೆ 2019-20ರಲ್ಲಿ ಇಂತಹ ಅವ್ಯವಹಾರ ತಡೆಯಲು ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದ್ದಾರೆ.