ಕರ್ನಾಟಕ

karnataka

ETV Bharat / state

ಇಬ್ಬರಿಗೆ ಕೊರೊನಾ ಪಾಸಿಟಿವ್: ಚಳ್ಳಕೆರೆಯ ಕೋಡಿಹಳ್ಳಿ-ಚಿಕ್ಕೆಹಳ್ಳಿ ಸೀಲ್‍ ಡೌನ್‍ಗೆ ನಿರ್ಧಾರ

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕೋಡಿಹಳ್ಳಿ ಗ್ರಾಮದ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ರೋಗಿ-993 ಮಹಿಳೆ ಹಾಗೂ ರೋಗಿ-994 ಪುರುಷ ಆಗಿದ್ದು, ತಂದೆ ಮತ್ತು ಮಗಳಲ್ಲಿ ಸೋಂಕು ಪತ್ತೆಯಾಗಿದೆ.

By

Published : May 15, 2020, 4:34 PM IST

Chitradurga
ಇಬ್ಬರಿಗೆ ಕೊರೊನಾ ಪಾಸಿಟಿವ್

ಚಿತ್ರದುರ್ಗ: ತಮಿಳುನಾಡಿನ ಚೆನೈಗೆ ತೆರಳಿ ಚಿತ್ರದುರ್ಗ ಜಿಲ್ಲೆಗೆ ವಾಪಸ್ ಆಗಿದ್ದ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕೋಡಿಹಳ್ಳಿ ಗ್ರಾಮದ ಇಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ರೋಗಿ-993 ಮಹಿಳೆ ಹಾಗೂ ರೋಗಿ-994 ಪುರುಷ ಆಗಿದ್ದು, ತಂದೆ ಮತ್ತು ಮಗಳಲ್ಲಿ ಸೋಂಕು ಪತ್ತೆಯಾಗಿದೆ.

ತಮಿಳುನಾಡಿನ ಚೆನ್ನೈನಿಂದ ಮೇ 5ರಂದು ಖಾಸಗಿ ವಾಹನದಲ್ಲಿ ಗ್ರಾಮಕ್ಕೆ ಆಗಮಿಸಿದ್ದು, ಇವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಮಾಹಿತಿ ಸಂಗ್ರಹಿಸಿ, ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

ನಾಲ್ವರು ಸದಸ್ಯರ ಕುಟುಂಬ ಚೆನ್ನೈನಿಂದ ಬೆಂಗಳೂರು ಮೂಲದ ಖಾಸಗಿ ವಾಹನದ ಮೂಲಕ ತಮ್ಮ ಸ್ವಗ್ರಾಮ ಕೋಡಿಹಳ್ಳಿ ಗ್ರಾಮಕ್ಕೆ ಮೇ 5ರಂದು ಆಗಮಿಸಿತ್ತು. ಇವರು ಅನುಮತಿ ಪಡೆದಿದ್ದರೇ ಅಥವಾ ಇಲ್ಲವೇ ಎಂಬುದರ ಬಗ್ಗೆ ದಾಖಲೆ ಪರಿಶೀಲಿಸಲಾಗುತ್ತಿದೆ. ಹೊರ ರಾಜ್ಯ ಅಥವಾ ಹೊರ ಜಿಲ್ಲೆಯಿಂದ ಬರುವವರ ಮಾಹಿತಿ ಸಂಗ್ರಹಿಸುವ ಸಲುವಾಗಿ ನೇಮಕವಾಗಿರುವ ಇಲ್ಲಿನ ರ್ಯಾಪಿಡ್ ರೆಸ್ಪಾನ್ಸ್ ತಂಡ, ಚೆನ್ನೈನಿಂದ ಬಂದ ಕುಟುಂಬದ ಬಗ್ಗೆ ಮಾಹಿತಿ ಪಡೆದು, ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದೆ.

ಈ ಹಿನ್ನೆಲೆಯಲ್ಲಿ ಮೇ 11ರಂದು ಕುಟುಂಬ ಸದಸ್ಯರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಯಿತು. ಇದೀಗ ಮೇ 15ರಂದು ಈ ಕುಟುಂಬ ಸದಸ್ಯರ ಪೈಕಿ ಇಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತನ ಪತ್ನಿಯ ವರದಿ ನೆಗೆಟಿವ್ ಬಂದಿದ್ದು, ಇವರ 20 ದಿನದ ಮಗುವಿನ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲು ನಿರ್ಧರಿಸಲಾಗಿದೆ. ಈ ನಡುವೆ ಸೋಂಕಿತ ವ್ಯಕ್ತಿ ಕೋಡಿಹಳ್ಳಿ ಸಮೀಪ 3 ಕಿ.ಮೀ. ದೂರದ ಚಿಕ್ಕೆಹಳ್ಳಿ ಗ್ರಾಮದ ಬಂಧುಗಳ ಮನೆಗೆ ಹೋಗಿ ಬಂದಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ಕೋಡಿಹಳ್ಳಿ, ಚಿಕ್ಕೆಹಳ್ಳಿ ಸೇರಿದಂತೆ 5 ಕಿ.ಮೀ. ವ್ಯಾಪ್ತಿಯನ್ನು ಕಂಟೇನ್‍ಮೆಂಟ್ ಝೋನ್ ಆಗಿ ಗುರುತಿಸಿ, ಸಂಪೂರ್ಣವಾಗಿ ಸೀಲ್‍ ಡೌನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ವಾಹನ ಚಾಲಕನ ಕುರಿತೂ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದರು.

ABOUT THE AUTHOR

...view details