ಚಿತ್ರದುರ್ಗ: ಪ್ರಧಾನಿ ಮೋದಿ ಈ ದೇಶದ ಭಸ್ಮಾಸುರನಂತೆ. ಹಾಗಾಗಿ ದೇಶದ ಆರೋಗ್ಯ ಹಾಳಾಯಿತು. ಅವರು ಆಧುನಿಕ ದುರ್ಯೋಧನ ಆಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ವಿರುದ್ದ ಗುಡುಗಿದ ಕಾಂಗ್ರೆಸ್ ಮುಖಂಡ ವಿ.ಎಸ್ ಉಗ್ರಪ್ಪ ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಾಗೂ ಅಂಬಾನಿ, ಅದಾನಿ ವಿರುದ್ಧ ದೇಶದಲ್ಲಿ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಗಿದೆ ಎಂದರು.
ದೇಶದಲ್ಲಿ 500 ರೈತ ಸಂಘಟನೆಗಳು ಹಾಗೂ 25 ಕ್ಕೂ ಅಧಿಕ ರಾಜಕೀಯ ಸಂಘಟನೆಗಳ ನೇತೃತ್ವದಲ್ಲಿ ರೈತ ವಿರೋಧಿ ಕಾನೂನು ವಿರೋಧಿಸಿ ದೆಹಲಿಯಲ್ಲಿ ಹೋರಾಟ ನಡೆಯುತ್ತಿದೆ. ಬಿಜೆಪಿ ಸರ್ಕಾರ ನಗರ ಭಾರತದ ಪರವಾಗಿ ಕೆಲಸ ಮಾಡುವ ಪ್ರವೃತಿ ಬೆಳೆಸಿಕೊಂಡಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಂಸತ್ತಿನಲ್ಲಿ ಕಾಯ್ದೆಗಳ ಚರ್ಚೆ ಮಾಡದೆ ಜಾರಿ ಮಾಡುವ ಮೂಲಕ, ಗ್ರಾಮೀಣ ಭಾರತದ ಕೃಷಿಕರನ್ನು ಸಮಾಧಿ ಮಾಡುತ್ತಿದೆ ಎಂದು ಕಿಡಿಕಾರಿದರು.
ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ ಕೃಷಿಕರ ಆದಾಯ ದ್ವಿಗುಣ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಆದ್ರೆ ಕೊರೊನಾ ಇರುವ ಸಮಯಲ್ಲಿ ರೈತ ವಿರೋಧಿ ಕಾಯ್ದೆ ಜಾರಿ ಮಾಡುವ ಅವಶ್ಯಕತೆ ಏನಿತ್ತು? ಎಂದು ಉಗ್ರಪ್ಪ ಪ್ರಶ್ನಿಸಿದರು.
ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಇದನ್ನು ಕೇಂದ್ರ ಬಿಜೆಪಿ ನಾಯಕರು ಅರಿತುಕೊಳ್ಳಬೇಕು. ಇತ್ತ ನೇಪಾಳದಂತಹ ಸಣ್ಣ ರಾಷ್ಟ್ರವು ಕೂಡ ನಮ್ಮ ದೇಶಕ್ಕೆ ತೊಡೆ ತಟ್ಟುತ್ತಿದೆ. ದೇಶದಲ್ಲಿ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ತೋರಿ ದೇಶದ ಗ್ರಾಮೀಣ ಭಾಗವನ್ನು ತುಳಿಯುವ ಕಾರ್ಯಕ್ಕೆ ಮುಂದಾಗಿದೆ ಅವರು ವಾಗ್ದಾಳಿ ನಡೆಸಿದರು.
ಜೆಡಿಎಸ್ ವಿರುದ್ಧ ವಾಕ್ ಸಮರ: ಜೆಡಿಎಸ್ ಪಕ್ಷದವರು ಈ ಮಣ್ಣಿನ ಮಕ್ಕಳು ಎಂದು ಹೇಳಿಕೊಂಡು ಬರ್ತಾರೆ. ಅವರದ್ದು ಬೆಳಿಗ್ಗೆ ಒಂದು ಸ್ಟ್ಯಾಂಡ್, ಸಂಜೆ ಮತ್ತೊಂದು ಸ್ಟ್ಯಾಂಡ್ ಎಂದು ಟೀಕಿಸಿದರು.