ಚಿತ್ರದುರ್ಗ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಕೋಟೆ ನಾಡು ಚಿತ್ರದುರ್ಗದಲ್ಲಿ ಸಾಗುತ್ತಿದೆ. ಚಳಕೆರೆ ತಾಲೂಕಿನ ಗಿರಿಯಮ್ಮನಹಳ್ಳಿ, ಕೋನಸಾಗರದ ಮೂಲಕ ಮೊಣಕಾಲ್ಮೂರಿಗೆ ಪಾದಯಾತ್ರೆ ತಲುಪಿದೆ. ಯಾತ್ರೆಯ ದಾರಿ ಉದ್ದಕ್ಕೂ ಜನಸಾಗರ ಕಂಡು ಬಂದಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಅನೇಕ ನಾಯಕರು ನಡೆಯುತ್ತಿದ್ದಾರೆ. ಯಾತ್ರೆ ಸಾಗುವ ಮಾರ್ಗ ಮಧ್ಯದಲ್ಲಿ ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಸೇರಿದಂತೆ ಹಲವು ವರ್ಗದ ಜನರು ಸೇರುತ್ತಿದ್ದಾರೆ.
ಗಿರಿಯಮ್ಮನಹಳ್ಳಿ ಹಾಗೂ ಕೋನಸಾಗರದಲ್ಲಿ ಪಾದಯಾತ್ರೆ ಸಾಗುವ ಎರಡು ಬದಿಗಳ ದಾರಿ ಉದ್ದಕ್ಕೂ ಸಾಕಷ್ಟು ಜನರು ಸೇರಿದ್ದರು. ಅಲ್ಲದೇ, ಮಹಿಳೆಯರು ಹಾಗೂ ಮಕ್ಕಳು ಪೂರ್ಣಕುಂಭ ಸ್ವಾಗತ ನೀಡಿದರು. ಇದೇ ವೇಳೆ, ಕೋನಸಾಗರಕ್ಕೆ ಸಾಗುವ ವೇಳೆ ಅಲ್ಲಿನ ಕೃಷಿಕರನ್ನು ರಾಹುಲ್ ಗಾಂಧಿ ಭೇಟಿ ಮಾಡಿದರು.
ಇದನ್ನೂ ಓದಿ:ನಾಳೆಯಿಂದ ಬಳ್ಳಾರಿಯಲ್ಲಿ ಭಾರತ್ ಜೋಡೋ ಪಾದಯಾತ್ರೆ: ಸಂಚಾರ ಮಾರ್ಗದಲ್ಲಿ ಬದಲಾವಣೆ
ರೈತರ ಹೊಲಕ್ಕೆ ತೆರಳಿ ಹಿಪ್ಪುನೇರಳೆ ಕೃಷಿ ಬಗ್ಗೆ ಮಾಹಿತಿ ಪಡೆದು ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು. ಜೊತೆಗೆ ನೀರಿನ ಟ್ಯಾಂಕರ್ವೊಂದರ ಮೇಲೆ ಹತ್ತಿರ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ ಅವರು ಮೇಲಿಂದ ಜನರತ್ತ ತ್ರಿರಂಗ ಧ್ವಜ ಪ್ರದರ್ಶಿಸಿದರು. ಈ ಸಂದಭದಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಜನರು ಸಿಳ್ಳೆ ಹಾಗೂ ಕೇಕೆಗಳನ್ನು ಹಾಕಿಸಿ ಜೈಕಾರ ಕೂಗಿದರು.
ಚಿಕ್ಕಮಕ್ಕಳಿಂದ ಪೂರ್ಣಕುಂಭ ಸ್ವಾಗತ
ಇನ್ನು, ಶನಿವಾರ ಬಳ್ಳಾರಿ ಜಿಲ್ಲೆಗೆ ಭಾರತ್ ಜೋಡೋ ಯಾತ್ರೆ ಪ್ರವೇಶಿಸಲಿದೆ. ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಭಾರತ್ ಜೋಡೋ ಯಾತ್ರೆ ನಿಮಿತ್ತ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಹಾಗೂ ಏಕೈಕ ಸಮಾವೇಶ ಇದಾಗಿದೆ. ಈ ಸಮಾವೇಶದ ಮೂಲಕ ರಾಜ್ಯ ಕಾಂಗ್ರೆಸ್ ತನ್ನ ಮತ್ತೊಮ್ಮೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಈ ಹಿಂದೆ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಜನ್ಮದಿನ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಸೇರಿಸುವ ಶಕ್ತಿ ಪ್ರದರ್ಶನ ಮಾಡಲಾಗಿತ್ತು.
ಇದನ್ನೂ ಓದಿ:ಭಾರತ್ ಜೋಡೋದ 33 ಯಾತ್ರಿಗಳಿಂದ ನೇತ್ರದಾನ ವಾಗ್ದಾನ.. ಅಂಗಾಂಗ ದಾನಿಗಳ ಕುಟುಂಬಸ್ಥರೊಂದಿಗೆ ರಾಹುಲ್ ಹೆಜ್ಜೆ