ಚಿತ್ರದುರ್ಗ: ಕಾಂಗ್ರೆಸ್ ಹಾಗೂ ಇನ್ನಿತರೆ ಪಕ್ಷಗಳು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿ ಮುಗ್ಧ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡಿವೆ ಎಂದು ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತಾನಾಡಿದ ಅವರು, ಮೋದಿ ಸರ್ಕಾರ ರೈತರಿಗೆ ಅನುಕೂಲಕರ ಕಾಯ್ದೆ ಜಾರಿ ಮಾಡಿದೆ. ರೈತ ಹೋರಾಟ ಪಂಜಾಬ್, ಹರಿಯಾಣ ರಾಜ್ಯಗಳಿಗೆ ಸೀಮಿತವಾಗಿದೆ. ಎಪಿಎಂಸಿ ಸೇರಿದಂತೆ ಹಲವು ಕಾಯ್ದೆಗಳ ಮೂಲಕ ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣ ಮಾಡುವ ಉದ್ದೇಶ ಪ್ರಧಾನಿ ಮೋದಿಯವರಿಗಿದೆ ಎಂದರು.
ಕಾಯ್ದೆಗಳ ಪ್ರಯೋಗಕ್ಕೆ ಮೊದಲು ಅವಕಾಶ ಮಾಡಿಕೊಡಬೇಕು. ಕಾಯ್ದೆಗಳಿಂದ ರೈತರಿಗೆ ಅನ್ಯಾಯವಾದರೆ 2 ವರ್ಷದ ಬಳಿಕ ವಾಪಸ್ ಪಡೆಯುವ ಕುರಿತು ಸರ್ಕಾರ ಯೋಚಿಸುತ್ತದೆ. ಅನ್ಯಾಯವಾದರೆ ಯಾವುದೇ ಸರ್ಕಾರವಿದ್ದರೂ ಕಾಯ್ದೆ ವಾಪಸ್ ಪಡೆದುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ನಿನ್ನೆ ದೆಹಲಿಯಲ್ಲಿ ನಡೆದ ಘಟನೆಗೆ ಕಾಂಗ್ರೆಸ್ ಪಕ್ಷ ಕುಮ್ಮಕ್ಕು ನೀಡಿದೆ ಎಂದು ದೂರಿದರು.
ಓದಿ:ದೆಹಲಿ ಹಿಂಸಾಚಾರದ ಹಿಂದೆ ಮೋದಿ ಹಿಂಬಾಲಕರ ಕೈವಾಡವಿದೆ: ಪ್ರೊ. ಮಹೇಶ್ ಚಂದ್ರಗುರು ಆರೋಪ
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ತಮ್ಮ ರಾಜಕೀಯ ಅಸ್ಥಿರತೆಯಿಂದ ಜನರ ದಿಕ್ಕು ತಪ್ಪಿಸಲು ಗಡಿ ತಗಾದೆ ವಿಚಾರಕ್ಕೆ ಬಂದಿದ್ದಾರೆ. ಜನರ ಗಮನ ಬೇರೆಡೆ ಸೆಳೆಯಲು ಈ ವಿಚಾರ ತೆಗೆದಿದ್ದಾರೆ. ಬೆಳಗಾವಿ ಗಡಿ ಭಾಗದಲ್ಲಿ ಎಂಇಎಸ್ ಪುಂಡಾಟಿಕೆ ಮಾಡುತ್ತಿರುವುದು ಸರಿಯಲ್ಲ ಎಂದರು.