ಚಿತ್ರದುರ್ಗ:ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಸಾವರ್ಕರ್ ಹೋರಾಟ ಮಾಡುವ ಮೂಲಕ ಅಂಡಮಾನ್ ನಿಕೋಬಾರ್ ಜೈಲಿನಲ್ಲಿ ಬಂಧಿಯಾಗಿದ್ದರು, ಅಂತಹ ಸ್ವಾತಂತ್ರ್ಯ ಹೋರಾಟಗಾರನ ಹೆಸರನ್ನು ಇಡಲು ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಸಚಿವ ಆರ್ ಅಶೋಕ್ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ಗೆ ವಂಶಪಾರಂಪರ್ಯದ ಹೆಸರು ಬೇಕೇ ವಿನಃ ಸಾವರ್ಕರ್ ಹೆಸರು ಬೇಡವಾಗಿದೆ: ಸಚಿವ ಅಶೋಕ್ ಕಾಂಗ್ರೆಸ್ ಅವರಿಗೆ ವಂಶಪಾರಂಪರ್ಯ ಆಡಳಿತದ ಹೆಸರೇ ಬೇಕು ವಿನಃ ಸಾವರ್ಕರ್ ಅವರ ಹೆಸರು ಬೇಡಾವಾಗಿದೆ ಎಂದು ಕಂದಾಯ ಸಚಿವ ಆಶೋಕ್ ತಿರುಗೇಟು ನೀಡಿದ್ದಾರೆ. ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರಿಟ್ಟರೆ ಅವಮಾನ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಹಿಂದುತ್ವ ಪ್ರತಿಪಾದಿಸುತ್ತಿದ್ದರು ಎಂಬ ಒಂದೇ ಕಾರಣಕ್ಕೆ ಸಾವರ್ಕರ್ ಅವರ ಹೆಸರಿಡಲು ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರಾಜೀವ್ ಗಾಂಧಿ, ಇಂದಿರಾಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಗಳ ಹೆಸರು ಬೇಕೇ ವಿನಃ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಹೆಸರಿಡಲು ಇವರು ಇಚ್ಚಿಸುವುದಿಲ್ಲ. 60 ವರ್ಷಗಳ ಕಾಲ ಆಡಳಿತ ನಡೆಸಿದರೂ ಕೂಡ ನಕಲಿ ಗಾಂಧಿಗಳ ಹೆಸರಿಟ್ಟು ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದರು.
ನಕಲಿ ಗಾಂಧಿ ಮನೋಸ್ಥಿತಿಯಿಂದ ಕಾಂಗ್ರೆಸ್ ಹೊರಬರಲಿ ಎಂದು ಟಾಂಗ್ ನೀಡಿದರು. ಮಹಾಮಾರಿ ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಬೆಸ್ಟ್ ಆಗಿದ್ದು, ಬೆಂಗಳೂರಿನಲ್ಲಿ ಕೊರೊನಾ ಕಂಟ್ರೋಲ್ ಮಾಡಿದ್ದಕ್ಕೆ ಕೇಂದ್ರ ಪ್ರಶಂಸೆ ವ್ಯಕ್ತಪಡಿಸಿದೆ. ಸರ್ಕಾರಕ್ಕೆ ಸಲಹೆ ಕೊಡುವುದು ಬಿಟ್ಟು ಕಾಂಗ್ರೆಸ್ ಹೋರಾಟಕ್ಕೆ ಅಣಿಯಾಗಿದೆ ಎಂದರು.