ಚಿತ್ರದುರ್ಗ:ಭದ್ರಾ ಮೇಲ್ದಂಡೆಯಿಂದ ಜಿಲ್ಲೆಯ ವೇದಾವತಿಗೆ ನೀರು ಹರಿಯುತ್ತಿರುವ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ಶಾಸಕರಿಬ್ಬರ ನಡುವೆ ಮಾತಿನ ಜಟಾಪಟಿ ಆರಂಭವಾಗಿದೆ.
ನೀರು ಹರಿಸುವ ಆದೇಶ ನಮ್ಮ ಸರ್ಕಾರದ ಅವಧಿಯಲ್ಲಿ ಆಗಿದ್ದು ಎಂದು ಇಬ್ಬರು ಶಾಸಕರು ಒಬ್ಬರಿಗೊಬ್ಬರು ವಾಗ್ವಾದಕ್ಕೆ ಇಳಿದಿದ್ದು, ನೀರಿನ ವಿಚಾರದಲ್ಲಿ ರಾಜಕೀಯ ಶುರು ಮಾಡಿದ್ದಾರೆ.
ನೀರು ಹರಿಸಿದ ವಿಚಾರ: ಚಿತ್ರದುರ್ಗದಲ್ಲಿ ಕೈ-ಕಮಲ ಶಾಸಕರಿಬ್ಬರ ನಡುವೆ ಮಾತಿನ ಫೈಟ್ ಕಳೆದೆರಡು ದಿನಗಳ ಹಿಂದೆ ಚಳ್ಳಕೆರೆ ತಾಲೂಕಿನ ಪರಶುರಾಂಪುರದಲ್ಲಿ ಸಚಿವ ಶ್ರೀರಾಮುಲು ಅವರ ನೇತೃತ್ವದಲ್ಲಿ ವೇದಾವತಿ ನದಿಗೆ ಬಾಗಿನ ಅರ್ಪಿಸಲಾಗಿತ್ತು. ಆ ಕಾರ್ಯಕ್ರಮಕ್ಕೆ ಅದೇ ಕ್ಷೇತ್ರದ ಕಾಂಗ್ರೆಸ್ ಶಾಸಕರಿಗೆ ಆಹ್ವಾನ ನೀಡಿಲ್ಲ ಎಂದು ಚಳ್ಳಕೆರೆ ಕಾಂಗ್ರೆಸ್ ಪಕ್ಷದ ಶಾಸಕ ರಘುಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೇ ಇವರು ಶಿಷ್ಠಾಚಾರ ಪಾಲನೆ ಮಾಡಿಲ್ಲ. ಎಲ್ಲಾ ಕೆಲಸ ನಮ್ಮ ಬಿಜೆಪಿ ಪಕ್ಷದವರೇ ಮಾಡಿದ್ದಾರೆ ಎಂದು ಹೇಳಿಕೊಳ್ಳುವುದು ಖಂಡನೀಯ ಎಂದು ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ 2013ರಲ್ಲಿ ಇದ್ದ ನಮ್ಮ ಕಾಂಗ್ರೆಸ್ ಪಕ್ಷದ ಕೊಡುಗೆಯೂ ಇದರಲ್ಲಿ ಇದೆ. ಆದರೆ ಬಿಜೆಪಿಯವರು ಈ ರೀತಿ ಅಪಪ್ರಚಾರ ಮಾಡ್ತಿರೋದು ಖಂಡನೀಯ ಎಂದಿದ್ದಾರೆ.
ಜಿಲ್ಲೆಯ ಬಿಜೆಪಿಯ ಹಿರಿಯ ಶಾಸಕರಾದ ತಿಪ್ಪಾರೆಡ್ಡಿ, ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಜಿಲ್ಲೆಯಲ್ಲಿ ಬಿಜೆಪಿಯ ಏಕೈಕ ಶಾಸಕನಾನಾಗಿದ್ದೆ. ಅಂದು ನನಗೆ ಯಾವುದೇ ಅಭಿವೃದ್ಧಿಗೆ ಅವಕಾಶ ನೀಡಿರಲಿಲ್ಲ. ಅಂದು ಈ ಶಾಸಕರು, ಇವರ ಮಂತ್ರಿಗಳು ಎಲ್ಲಿ ಹೋಗಿದ್ದರು ಎಂದು ರಘುಮೂರ್ತಿ ವಿರುದ್ಧ ಕಿಡಿಕಾರಿದ್ದಾರೆ.
ಈ ಬಾರಿ ನಮ್ಮದೇ ಸರ್ಕಾರ ಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಹಾಗೂ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವೇದಾವತಿ ನದಿಗೆ ನೀರು ಹರಿಸಲು ಒಪ್ಪಿಗೆ ಸೂಚಿಸಿದ್ದರು. ಇದರಿಂದ ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಇದು ಸುಮಾರು 45 ವರ್ಷಗಳ ಹೋರಾಟದ ಪ್ರತಿಫಲ ಎಂದು ಕಾಂಗ್ರೆಸ್ ಶಾಸಕರಿಗೆ ಟಾಂಗ್ ನೀಡಿದ್ದಾರೆ.
ಈ ಇಬ್ಬರೂ ಶಾಸಕರು ಚಿತ್ರದುರ್ಗ ತಾಲೂಕಿನ ಕಡಬನಕಟ್ಟೆ ಗ್ರಾಮದವರು. ಬೇರೆ ಬೇರೆ ಪಕ್ಷದಲ್ಲಿದ್ದು, ವೈಯಕ್ತಿಕವಾಗಿ ಏನೇ ಇದ್ದರೂ ಜಿಲ್ಲೆ ವಿಚಾರ ಬಂದಾಗ ಪಕ್ಷ ಭೇದ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಅನ್ನೋದು ಸಾರ್ವಜನಿಕರ ಅಭಿಪ್ರಾಯವಾಗಿದೆ.