ಚಿತ್ರದುರ್ಗ:ಜಿಲ್ಲಾಡಳಿತ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಕಳೆದ ಹಲವು ತಿಂಗಳಿನಿಂದ ಅಧಿಕಾರಿಗಳು ಜಾಗ ಹುಡುಕುವ ಪ್ರಯತ್ನ ಮಾಡುತ್ತಿದ್ದು, ಕೊನೆಗೂ ಕೋಟೆನಾಡಿನ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕುಂಚಿಗನಾಳ್ ಬೆಟ್ಟದ ಜಾಗ ನಿಗದಿ ಮಾಡಿ, ಈಗಾಗಲೇ ಗುಡ್ಡ ನೆಲಸಮಕ್ಕೆ ಅಧಿಕಾರಿಗಳು ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ಅದ್ರೆ ಕಟ್ಟಡ ನಿರ್ಮಾಣದ ಜಾಗದ ವಿಚಾರವಾಗಿ ಮತ್ತೆ ಗೊಂದಲ ಶುರುವಾಗಿದೆ.
ಹೌದು, ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4ರ ಬಳಿಯಲ್ಲಿರುವ ಕುಂಚಿಗನಾಳ್ ಬೆಟ್ಟ ನೆಲಸಮಗೊಳಿಸಿ, ಜಿಲ್ಲಾಡಳಿತ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಒಟ್ಟು 40 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿಗಳು ಯೋಜನೆ ಹಾಕಿಕೊಂಡಿದ್ದರು. ಇತ್ತ ಸರ್ಕಾರ 45 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲು ಹಸಿರು ನಿಶಾನೆ ತೋರಿಸಿತು. ಈಗಾಗಲೇ ಮುಂಗಡವಾಗಿ 25 ಕೋಟಿ ರೂಪಾಯಿ ಹಣ ಕೂಡ ಬಿಡುಗಡೆ ಮಾಡಿದೆ.
ಕಳೆದ ನಾಲ್ಕೈದು ತಿಂಗಳಿನಿಂದ ಬೆಟ್ಟ ನೆಲಸಮ ಮಾಡುವ ಕಾರ್ಯ ಭರದಿಂದ ಸಾಗಿದೆ. ಬೆಟ್ಟದ ಮಣ್ಣನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಪಿಎನ್‌ಸಿ ಬಳಸಿಕೊಳ್ಳಲಾಗುತ್ತಿತ್ತು. ಸದ್ಯ ಬೆಟ್ಟ ನೆಲಸಮ ಮಾಡುವ ಜಾಗದಲ್ಲಿ ದೊಡ್ಡ ಬೃಹದಾಕಾರದ ಬಂಡೆ ಕಾಣಿಸಿಕೊಂಡಿದೆ ಎಂದು ತೆರವಿಗೆ ಕೋಟಿ ಕೋಟಿ ಹಣ ಖರ್ಚಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೆ ಬೇರೆಡೆಗೆ ಸ್ಥಳಕ್ಕೆ ಜಿಲ್ಲಾಡಳಿತ ಕಟ್ಟಡ ನಿರ್ಮಿಸುಲು ಅಧಿಕಾರಿಗಳು ಓಡಾಟ ನಡೆಸುತ್ತಿರುವುದಕ್ಕೆ ಸಾರ್ವಜನಿಕರು ಗರಂ ಆಗುವಂತಾಗಿದೆ.
ಈಗಾಗಲೇ ಅರ್ಧಕ್ಕಿಂತ ಹೆಚ್ಚು ಗುಡ್ಡ ಅಗೆಯಲಾಗಿದೆ. ಮಣ್ಣು ಖಾಲಿ ಮಾಡಿ ಅಧಿಕಾರಿಗಳು ನಿಗದಿಪಡಿಸಿದ ಸ್ಥಳದಲ್ಲಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣ ಮಾಡಲಾಗುವುದಿಲ್ಲ ಎಂದು ಅಸಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಚಿತ್ರದುರ್ಗ ನಗರವಿಡೀ ಸುತ್ತಾಡಿ ಕಟ್ಟಡ ನಿರ್ಮಾಣಕ್ಕೆ ಬೇರೆ ಜಾಗದ ಹುಡುಕಾಟದಲ್ಲಿ ತೊಡಗಿದ್ದಾರೆ.
ಈ ಕುರಿತು ಎಚ್ಚರಿಸಿದ 'ಈಟಿವಿ ಭಾರತ'
ಇತ್ತ ಕುಂಚಿಗನಾಳ್ ಬೆಟ್ಟದಲ್ಲಿ ಬಂಡೆ ಕಾಣಿಸಿಕೊಂಡಿದೆ ಅದನ್ನು ತೆರವು ಮಾಡಲು ಕೋಟಿಕೋಟಿ ಹಣ ಖರ್ಚಾಗುತ್ತೆ ಹೀಗಾಗಿ ಜಿಲ್ಲಾಡಳಿತಕ್ಕೆ ಮತ್ತೆ ಐದು ಕೋಟಿ ರೂಪಾಯಿ ಹೊರೆಯಾಗುತ್ತದೆ ಎಂದು ಕಳೆದ ತಿಂಗಳಷ್ಟೇ 'ಈಟಿವಿ ಭಾರತ' ವರದಿ ಮಾಡಿತ್ತು. ಅಲ್ಲದೆ ಅಪಾರ ಪ್ರಮಾಣದ ನೈಸರ್ಗಿಕ ಸಂಪತ್ತು ಲೂಟಿ ಮಾಡುತ್ತಿರುವ ಆರೋಪದ ಬಗ್ಗೆ ವಿಸ್ತೃತ ವರದಿ ಬಿತ್ತರಿಸಿತ್ತು. ಚಿತ್ರದುರ್ಗಕ್ಕೆ ದ್ವಾರ ಬಾಗಿಲುನಂತಿದ್ದ ಕುಂಚನಾಳ್ ಬೆಟ್ಟ ಅರ್ಧಂಬರ್ಧ ಬಗೆದ ಬಳಿಕ ಅಧಿಕಾರಿಗಳು ಅಸಾಯಕತೆ ತೋಡಿಕೊಳ್ಳುತ್ತಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಕುಮ್ಮಕ್ಕಿನಿಂದ ಬೆಟ್ಟದ ಅಪಾರ ಸಂಪತ್ತು ಲೂಟಿಯಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಆರೋಪ ಮಾಡುತ್ತಿದ್ದಾರೆ.