ಚಿತ್ರದುರ್ಗ:ಅಯೋಧ್ಯೆಯಲ್ಲಿ ಕೊನೆಗೂ ರಾಮ ಮಂದಿರ ನಿರ್ಮಾಣದ ಕೈಂಕರ್ಯ ಶುರುವಾಗಿದೆ. ಈ ದಿನಕ್ಕಾಗಿ 1989 ಅಕ್ಟೊಬರ್ 31 ರಲ್ಲಿ ರಾಮ ಜನ್ಮ ಸ್ಥಾನದಲ್ಲಿ ಮಂದಿರ ನಿರ್ಮಾಣ ಮಾಡಲು ವಿಶ್ವ ಹಿಂದೂ ಪರಿಷತ್ ನೀಡಿದ್ದ ಕರೆಗೆ ಓಗೊಟ್ಟು ಚಿತ್ರದುರ್ಗದಿಂದಲೂ ಸಾಕಷ್ಟು ಜನ ಕರಸೇವಕರು ಭಾಗಿಯಾಗಿದ್ದು ವಿಶೇಷ.. ಈ ಕುರಿತು ಅಂದು ಭಾಗವಹಿಸಿದ್ದ ಕರಸೇವಕರು ಇಂದು ತಮ್ಮ ಅನುಭವಗಳನ್ನು ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ.
ಡಿಸೆಂಬರ್ 6ಕ್ಕೆ ಬಾಬರೀ ಮಸೀದಿ ಧ್ವಂಸ ಮಾಡಿ ಮಂದಿರ ನಿರ್ಮಾಣ ಮಾಡಲು ಪಣ ತೊಟ್ಟು ಚಿತ್ರದುರ್ಗದಿಂದಲೇ ಸಾಕಷ್ಟು ಹೋರಾಟ ಕೂಡ ಮಾಡಲಾಗಿತ್ತು. ಇನ್ನು ಕೆಲ ಕರಸೇವಕರು 1992ರ ಹೋರಾಟದಲ್ಲಿ ಭಾಗಿಯಾಗಲು ರಾಯಚೂರು ಮೂಲಕ ರೈಲಿನಲ್ಲಿ ಸಂಚರಿಸಿ ಎದುರಾದ ಸಾಕಷ್ಟು ಸಮಸ್ಯೆಗಳನ್ನು ಹಿಮ್ಮೆಟ್ಟಿಸಿ ಅಯೊಧ್ಯೆಯ ರಾಮ ಜನ್ಮ ಸ್ಥಾನಕ್ಕೆ ತೆರಳಿದೆವು.
ಕಷ್ಟ ಪಟ್ಟು ಅಯೋಧ್ಯೆಗೆ ತೆರಳಿದ್ದ ನಮಗೆ ಪೊಲೀಸರ ಗೋಲಿ ಬಾರ್ ಮಾಡುತ್ತಿದ್ದ ದೃಶ್ಯಗಳು ಸ್ವಾಗತಿಸಿದ್ದವು. ದೇಶಾದಂತ್ಯ ಆಗಮಿಸಿದ್ದ ಕರಸೇವಕರು ರಾಮಲಲ್ಲಾನ ದರ್ಶನ ಇಲ್ಲದೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟಿಸಿದಾಗ ದರ್ಶನಕ್ಕೆ ಅವಕಾಶ ಕಲ್ಪಿಸದ್ದು ನೆನಪು ಇನ್ನು ನೆನಪಾಗುತ್ತದೆ ಎನ್ನುತ್ತಾರೆ ಕರಸೇವಕರೊಬ್ಬರು.
1992 ಡಿಸೆಂಬರ್ 06 ರಂದು ಚಿತ್ರದುರ್ಗದಿಂದ ಸುಮಾರು 06 ಜನ ಕರ ಸೇವಕರು ಭೇಟಿ ನೀಡಿದ್ದು ವಿಶೇಷವಾಗಿದೆ. ಈ ಆರು ಜನ್ರು ಚಿತ್ರದುರ್ಗದಿಂದ ಹೊರಟು ದಾವಣಗೆರೆ, ಸೊಲ್ಲಾಪುರ, ನಂತರ ಅಯೋಧ್ಯೆ ತಲುಪಿ ಅಲ್ಲಿ ಕರಸೇವೆಯಲ್ಲಿ ಭಾಗಿಯಾಗಿದ್ದರಂತೆ. ಹೋರಾಟದಲ್ಲಿ ಭಾಗಿಯಾಗಿ ಬಳಿಕ ಚಿತ್ರದುರ್ಗಕ್ಕೆ ಆಗಮಿಸಿದ ಕೆಲ ಕರ ಸೇವಕರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು, ಇನ್ನು ಕೆಲವರು ಮೂರ್ನಾಲ್ಕು ತಿಂಗಳುಗಳ ಕಾಲ ತಲೆ ಮರೆಸಿಕೊಂಡು ಬಳಿಕ ಚಿತ್ರದುರ್ಗಕ್ಕೆ ಆಗಮಿಸಿದ ಘಟನೆಗಳ ನೆನಪುಗಳನ್ನು ಮೆಲಕು ಹಾಕಿದರು.
ಒಟ್ಟಾರೆ ದೇಶದ ಜನರ ಹಲವು ವರ್ಷಗಳ ಕನಸು ನನಸಾಗುತ್ತಿದ್ದು, ನಾಳೆ ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಲಿದೆ. ಈ ಅಭೂತಪೂರ್ವ ಸನ್ನಿವೇಶಕ್ಕೆ ಮಾದಾರ ಚೆನ್ನಯ್ಯ ಶ್ರೀ ಸಾಕ್ಷಿಯಾಗಲಿದ್ದು, ಶ್ರೀಗಳು ಚಿತ್ರದುರ್ಗದ ಮಣ್ಣುನ್ನು ಕೂಡು ಹೊತ್ತೊಯ್ಯಿದಿರುವುದು ವಿಶೇಷವಾಗಿದೆ.