ಚಿತ್ರದುರ್ಗ :ರಾಜ್ಯದ ಅತ್ಯಂತ ಹಳೆಯ ಜಲಾಶಯಗಳ ಸಾಲಿನಲ್ಲಿರುವ ವಾಣಿವಿಲಾಸ ಜಲಾಶಯವು ಸುಮಾರು ವರ್ಷಗಳ ಬಳಿಕ ತುಂಬಿದೆ. ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯ ಕಳೆದ 14 ವರ್ಷಗಳಿಂದ ಬರಿದಾಗುವ ಹಂತಕ್ಕೆ ಬಂದಿತ್ತು. ಆದರೆ, ಈ ಬಾರಿ ಸುರಿದ ಉತ್ತಮ ಮಳೆಯಿಂದಾಗಿ ಜಲಾಶಯದ ನೀರಿನ ಮಟ್ಟ ಏರಿಕೆಯಾಗಿ 103 ಅಡಿಗೆ ಬಂದು ತಲುಪಿರೋದು ಜಿಲ್ಲೆಯ ರೈತರಿಗೆ ವರವಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ಪ್ರತಿದಿನ 500 ಕ್ಯೂಸೆಕ್‌ನಷ್ಟು ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ದಿನದಿಂದ ದಿನಕ್ಕೆ ನೀರಿನ ಮಟ್ಟ ಹೆಚ್ಚಾಗುತ್ತಿರುವುದಕ್ಕೆ ಕೃಷಿ ಚಟುವಟಿಕೆ, ತೋಟಗಾರಿಕೆ ಹಾಗೂ ಕುಡಿಯುವ ನೀರಿಗೆ ಬರವಿಲ್ಲಂತಾಗಿದೆ. ಹೊಸದುರ್ಗ, ಹಿರಿಯೂರು, ಚಿತ್ರದುರ್ಗ ಭಾಗದ ಜನರು 800 ರಿಂದ 1000 ಅಡಿ ಬೋರ್ವೆಲ್ ಕೊರೆಸಿದರೂ ಸಹ ನೀರು ಸಿಗುತ್ತಿರಲಿಲ್ಲ. ಆದರೆ, ಇದೀಗ ವಾಣಿವಿಲಾಸ ಜಲಾಶಯದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ.