ಚಿತ್ರದುರ್ಗ :ಬೀದಿಗಳಲ್ಲಿ ನಾಯಿ ಕಂಡರೆ ಕಲ್ಲು ಹೊಡೆಯುವ ಜನಗಳೇ ಹೆಚ್ಚು. ಅದರಲ್ಲೂ ಬೀದಿನಾಯಿಗಳು ಕಂಡ್ರೆ ಎಷ್ಟೋ ಜನ ಮೂಗು ಮುರಿಯುತ್ತಾರೆ. ಇಂತಹ ಸನ್ನಿವೇಶಗಳಲ್ಲಿ ಇಲ್ಲೊಬ್ಬ ಮಹಿಳೆ ನಿತ್ಯವೂ ಬೀದಿ ನಾಯಿಗಳ ಹೊಟ್ಟೆ ತುಂಬಿಸುವ ಮೂಲಕ ಮಾನವೀಯ ಕಾರ್ಯದಲ್ಲಿ ತೊಡಗಿದ್ದಾರೆ.
ಬೀದಿಗಳಲ್ಲಿ ವಾಸಮಾಡುವ ನಾಯಿಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತವೆ. ಸ್ವಲ್ಪ ಯಾಮಾರಿದ್ರೂ ವಾಹನಗಳಿಗೆ ಸಿಕ್ಕು ತಮ್ಮ ಪ್ರಾಣ ಕೂಡ ಕಳೆದುಕೊಳ್ಳುತ್ತವೆ. ಇವೆಲ್ಲವುಗಳನ್ನು ಮನಗಂಡ ಕೋಟೆನಾಡಿನ ವಿಶ್ವೇಶ್ವರಯ್ಯ ಬಡಾವಣೆಯ ಪದ್ಮಾವತಿ ಎಂಬುವರು ನಿತ್ಯವೂ 70ಕ್ಕೂ ಅಧಿಕ ಶ್ವಾನಗಳಿಗೆ ಅನ್ನ ನೀಡುವ ಅನ್ನದಾತೆಯಾಗಿದ್ದಾರೆ.
ಪ್ರತಿದಿನ ದ್ವಿಚಕ್ರ ವಾಹನದ ಮೂಲಕ ಬೀದಿ ಬೀದಿ ಸಂಚರಿಸಿ ನಾಯಿಗಳಿದ್ದ ಸ್ಥಳಕ್ಕೆ ತೆರಳಿ ಬ್ರೆಡ್,ಹಾಲು, ಬಿಸ್ಕೆಟ್, ಅನ್ನ ಮುಂತಾದ ಆಹಾರ ನೀಡುವ ಮೂಲಕ ಮೂಕಪ್ರಾಣಿಗಳ ಹೊಟ್ಟೆ ತುಂಬಿಸುತ್ತಾರೆ. ಅಷ್ಟೇ ಅಲ್ಲ, ನಾಯಿಗಳು ಅನಾರೋಗ್ಯಕ್ಕೆ ತುತ್ತಾದ್ರೆ ಅವುಗಳಿಗೆ ಆರೋಗ್ಯೋಪಚಾರವನ್ನು ಸಹ ಪದ್ಮಾವತಿ ಮಾಡುತ್ತಾರೆ.
ಸಾರ್ವಜನಿಕರಿಂದ ಶ್ಲಾಘನೆ :ಪದ್ಮಾವತಿಯವರು ಬೀದಿ ನಾಯಿಗಳ ಮೇಲೆ ತೋರಿಸುತ್ತಿರುವ ಪ್ರೀತಿ ಕಂಡು ನಗರ ನಿವಾಸಿಗಳು ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರು ಚಿಕ್ಕವರಾಗಿದ್ದಾಗ ಇವರಮ್ಮ ಮನೆಯಲ್ಲಿ ಬೀದಿ ನಾಯಿ ಸಾಕಿಕೊಂಡಿದ್ದರಂತೆ, ಅಲ್ಲಿಂದ ಆರಂಭವಾದ ಬೀದಿನಾಯಿಗಳ ಮೇಲಿನ ಪ್ರೀತಿ ಹಾಗೆ ಮುಂದುವರೆದಿದ್ದು, ಪ್ರತಿದಿನ 80ಕ್ಕೂ ಅಧಿಕ ಶ್ವಾನಗಳ ಹೊಟ್ಟೆ ತುಂಬಿಸುವರೆಗೂ ನಡೆದಿದೆ.