ಚಿತ್ರದುರ್ಗ: ಈರುಳ್ಳಿಯು ಜಿಲ್ಲೆಯ ಪ್ರಮುಖ ಬೆಳೆ. ಕಳೆದ ವರ್ಷ ಗಗನಕ್ಕೇರಿದ್ದ ಈರುಳ್ಳಿ ಬೆಲೆಯಿಂದ ಅದೆಷ್ಟೋ ರೈತರು ರಾತ್ರೋರಾತ್ರಿ ಶ್ರೀಮಂತರಾಗಿದ್ದರು. ಆದ್ರೆ ಈ ವರ್ಷ ಮಳೆ ಸೃಷ್ಟಿಸಿದ ಅವಾಂತರದಿಂದ ಈರುಳ್ಳಿ ಕೊಳೆತು ಹೋಗುತ್ತಿದ್ದು, ರೈತರಿಗೆ ಕಣ್ಣೀರು ತರಿಸಿದೆ.
ಮಳೆ ಅವಾಂತರ: ರೈತರಿಗೆ ಕಣ್ಣೀರು ತರಿಸುತ್ತಿದೆ ಕೊಳೆತ ಈರುಳ್ಳಿ - ಈರುಳ್ಳಿ ಬೆಳೆ ಸಮಸ್ಯೆ
ಬೆಳೆದ ಈರುಳ್ಳಿ ಉಪಯೋಗಕ್ಕೆ ಯೋಗ್ಯವಲ್ಲ. ಕೊಳೆತು ಹೋಗಿವೆ ಎಂದು ರೈತರು ಈರುಳ್ಳಿಯನ್ನು ತಿಪ್ಪೆಗೆ ಎಸೆಯುತ್ತಿರುವ ಮನ ಕಲಕುವ ದೃಶ್ಯ ಚಳ್ಳಕೆರೆ ತಾಲೂಕಿನ ಕೊವೇರಹಟ್ಟಿ ಗ್ರಾಮದಲ್ಲಿ ಕಂಡು ಬಂಡಿದೆ.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕೊವೇರಹಟ್ಟಿ ಗ್ರಾಮದ ರೈತರು ಕಂಗಾಲಾಗಿದ್ದಾರೆ. ಬೆಳೆದ ಈರುಳ್ಳಿ ಕೊಳೆತು ಹೋಗುತ್ತಿದ್ದು, ತಿಪ್ಪೆಗೆ ಎಸೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 20 ದಿನಗಳಿಂದ ಈ ಭಾಗದಲ್ಲಿ ಮಳೆಯು ಆಗಿಂದಾಗ ಸುರಿಯುತ್ತಿರುವ ಪರಿಣಾಮ ಈರುಳ್ಳಿ ಕೊಳೆತು ಹೋಗುತ್ತಿದ್ದು, ರೈತನ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಕೊಳೆತ ಈರುಳ್ಳಿ ಒಂದು ಸಮಸ್ಯೆಯಾದರೆ, ಸೂಕ್ತ ಬೆಲೆ ಸಿಗದಿರುವುದು ಮತ್ತೊಂದು ಸಮಸ್ಯೆಯಾಗಿ ರೈತ ಕಣ್ಣೀರಿಡುತ್ತಿದ್ದಾನೆ.
ಲಕ್ಷಾಂತರ ರೂಪಾಯಿ ಸಾಲ ಸೂಲ ಮಾಡಿ ಸುಮಾರು 15 ಎಕರೆ ಪ್ರದೇಶದಲ್ಲಿ ಬೆಳೆ ಬೆಳೆದಿದ್ದ ರೈತರು ನಷ್ಟ ಅನುಭವಿಸಿ ಇಂದು ಸಂಕಷ್ಟಕ್ಕೀಡಾಗಿದ್ದಾರೆ. ಹಾಗಾಗಿ ಕೂಡಲೇ ಸರ್ಕಾರ ಈರುಳ್ಳಿ ನಾಶದಿಂದ ನಷ್ಟ ಅನುಭವಿಸುತ್ತಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕಿದೆ.