ಚಿತ್ರದುರ್ಗ:ಪಡಿತರ ಸಗಟು ಆಹಾರ ಧಾನ್ಯಮಳಿಗೆಗೆ ಇಂದು ಸಚಿವ ಕೆ.ಗೋಪಾಲಯ್ಯ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಪರಿಶೀಲನೆ ವೇಳೆ ಮಾತನಾಡಿದ ಅವರು, ಜೂ. 11 ರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪಾಲಿನ ಒಂದು ಯೂನಿಟ್‍ಗೆ 10 ಕೆ.ಜಿ. ಅಕ್ಕಿ, ಕುಟುಂಬಕ್ಕೆ ತಲಾ 2 ಕೆ.ಜಿ ಬೇಳೆ ಹಾಗೂ ಗೋಧಿ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ. ಹಾಗಾಗಿ ಗೋದಾಮಿನಲ್ಲಿನ ಪದಾರ್ಥಗಳನ್ನು ಖುದ್ದು ವೀಕ್ಷಣೆ ಮಾಡುವ ಉದ್ದೇಶದಿಂದ ಭೇಟಿ ನೀಡುತ್ತಿದ್ದು, ಇದರಲ್ಲಿ ಏನಾದರೂ ಸಮಸ್ಯೆ ಕಂಡು ಬಂದರೆ ಬದಲಾವಣೆ ಮಾಡಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಮಂಗಳವಾರದ ನಂತರ ಆಹಾರ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಐದು ತಂಡಗಳನ್ನಾಗಿ ಮಾಡಿ ರಾಜ್ಯಾದ್ಯಂತ ಆಹಾರ ವಿತರಣೆ ಮಾಡಲಾಗುತ್ತದೆ. ಇದಕ್ಕೂ ಮುನ್ನ ಅಧಿಕಾರಿಗಳು ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲಿನ ಗೋದಾಮುಗಳನ್ನು ತಂಡೋಪತಂಡವಾಗಿ ತಪಾಸಣೆ ನಡೆಸಲು ಚಿಂತನೆ ನಡೆಸಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದ ಸಂಕಷ್ಟದ ಸಮಯದಲ್ಲಿ ಜನರಿಗೆ ಸರಿಯಾದ ರೀತಿಯಲ್ಲಿ ಆಹಾರ ಧಾನ್ಯಗಳ ವಿತರಣೆಯಾಗಬೇಕು ಎಂದು ಹೇಳಿದರು.
ಕಾರ್ಡ್ ಇಲ್ಲದ ಕುಟುಂಬಕ್ಕೆ ಪಡಿತರವಿತರಣೆ ಕ್ರಮ:
ಕಡುಬಡವರಿಗೆ, ಹೊರರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಆಗಮಿಸಿರುವ ವಲಸೆ ಕಾರ್ಮಿಕರಿಗೆ, ಕಾರ್ಡ್ ಇಲ್ಲದ ಕುಟುಂಬಕ್ಕೂ ಕೇವಲ ಆಧಾರ್ ಕಾರ್ಡ್ ಇದ್ದರೆ ಸಾಕು 10 ಕೆ.ಜಿ ಅಕ್ಕಿ, ಗೋಧಿ, ಬೇಳೆ, ಕಡಲೇ ಕಾಳು ವಿತರಣೆ ಮಾಡಲಾಗುವುದು ಎಂದರು.