ಚಿತ್ರದುರ್ಗ: ನಗರದ ಹೊರಭಾಗದಲ್ಲಿರುವ ಮಲ್ಲಾಪುರ ಗ್ರಾಮದ ಕೆರೆ ನೀರು ಸ್ಥಳೀಯ ನಿವಾಸಿಗಳಿಗೆ ದೊಡ್ಡ ತಲೆನೋವಾಗಿದೆ. ನಗರದ ಚರಂಡಿ ನೀರು ಸೇರುವ ಕೆರೆ, ಮಳೆ ಬಂದರೆ ಸಾಕು ತುಂಬಿ ಹತ್ತಿರದ ಮನೆಗಳಿಗೆ ನುಗ್ಗುತ್ತಿದ್ದು ಜನರು ಜಿಲ್ಲಾಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ಅಲ್ಲದೇ, ನೀರು ಹರಿಯುವ ಸ್ಥಳದ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್ಫಾರಂ ಅಳವಡಿಕೆ ಮಾಡಲಾಗಿದೆ. ವಿದ್ಯುತ್ ಕಂಬ ಸ್ವಲ್ಪ ವಾಲಿದರು, ಸಾರ್ವಜನಿಕರಿಗೆ ಅಪಾಯ ತಪ್ಪಿದ್ದಲ್ಲ. ಈ ಕುರಿತು ಸ್ಥಳೀಯರು ವಿದ್ಯುತ್ ಟ್ರಾನ್ಸ್ಫಾರಂ ಬೇರೆಡೆಗೆ ಸ್ಥಳಾಂತರಗೊಳಿಸಿ, ಕೋಡಿ ಒಡೆದ ಕೆರೆ ನೀರು ಹೋಗಲು ಪರ್ಯಾಯ ಮಾರ್ಗ ಕಲ್ಪಿಸುವಂತೆ ಮಲ್ಲಾಪುರ ಗ್ರಾಮದ ನಿವಾಸಿಗಳು ಆಗ್ರಹಿಸುತ್ತಿದ್ದಾರೆ.
ಭಯದ ವಾತಾವರಣ ಸೃಷ್ಟಿಸಿದ ಮಲ್ಲಾಪುರ ಕೆರೆ ಪದೇ ಪದೆ ಕೆರೆ ಕೋಡಿ ಒಡೆಯುತ್ತಿರುವುದು, ಪಕ್ಕದಲ್ಲೇ ವಾಸ ಮಾಡುವ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮಳೆಗಾಲದ ಆರಂಭಕ್ಕೂ ಮುನ್ನವೇ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕೆರೆಯ ಹೂಳು ಎತ್ತುವಂತೆ ಜನರು ಆಗ್ರಹಿಸುತ್ತಿದ್ದಾರೆ. ಇನ್ನೂ, ಮಳೆಯ ಅವಾಂತರದಿಂದ ನಗರದ ಗುಮಾಸ್ತ ಕಾಲೋನಿ, ಕೆಳಗೋಟೆ, ಬಸ್ ನಿಲ್ದಾಣ ಹಿಂಭಾಗ ಸೇರಿದಂತೆ ಹಲವು ಭಾಗಗಳಲ್ಲಿ ಮಳೆನೀರು ಸಂಗ್ರಹ ಆಗುತ್ತಿರುವುದಕ್ಕೆ ಜಿಲ್ಲಾಡಳಿತದ ವಿರುದ್ದ ಸಾರ್ವಜನಿಕರು ಕಿಡಿಕಾರಿದ್ದಾರೆ.
ಒಟ್ಟಿನಲ್ಲಿ ಮುಂದಾಲೋಚನೆ ಇರದ ಜಿಲ್ಲಾಡಳಿತದ ವಿರುದ್ಧ ಕೋಟೆನಗರಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ದೊಡ್ಡ ಅವಾಂತರ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂಬುವುದು ಇಲ್ಲಿನ ಜನರ ಮಾತು.