ಕರ್ನಾಟಕ

karnataka

ETV Bharat / state

4 ತಿಂಗಳ ಬಳಿಕ ತೆರೆದ ಐತಿಹಾಸಿಕ ಕೋಟೆ ಬಾಗಿಲು: ಭೇಟಿಗೆ ಪ್ರವಾಸಿಗರ ಹಿಂದೇಟು

ಕೊರೊನಾ ವೈರಸ್ ನಿಯಂತ್ರಣ ಮಾಡುವ ಸಲುವಾಗಿ ಚಿತ್ರದುರ್ಗದ ಏಳು ಸುತ್ತಿನ ಕೋಟೆಗೆ ನಾಲ್ಕು ತಿಂಗಳ ಕಾಲ ಬಂದ್​ ಮಾಡಲಾಗಿತ್ತು. ಇದೀಗ ಪ್ರವಾಸಿಗರಿಗಾಗಿ ಕೋಟೆ ಬಾಗಿಲನ್ನು ತೆರೆಯಲು ಕೇಂದ್ರ ಪುರಾತತ್ವ ಇಲಾಖೆ ಅನುಮತಿ ನೀಡಿದೆ. ಆದರೆ, ಕೇವಲ ಬೆರಳೆಣಿಕೆಯಷ್ಟು ಪ್ರವಾಸಿಗರು ಮಾತ್ರ ಆಗಮಿಸುತ್ತಿದ್ದಾರೆ.

By

Published : Jul 22, 2020, 9:41 AM IST

fort
fort

ಚಿತ್ರದುರ್ಗ:ಕೋಟೆಗಳ ನಾಡು ಎಂದೇ ಖ್ಯಾತಿಗಳಿಸಿರುವ ಐತಿಹಾಸಿಕ ಚಿತ್ರದುರ್ಗ ಜಿಲ್ಲೆ ಏಳು ಸುತ್ತಿನ ಕೋಟೆಯಿಂದಲೇ ಚಿರಪರಿಚಿತ. ಇಷ್ಟು ದಿನಗಳ ಕಾಲ ಮುಚ್ಚಲ್ಪಟ್ಟಿದ್ದ ಐತಿಹಾಸಿಕ ಕೋಟೆ ಇದೀಗ ಮತ್ತೆ ತೆರೆದಿದೆ. ಆದ್ರೆ ಐತಿಹಾಸಿಕ ಕೋಟೆಗೆ ಭೇಟಿ ನೀಡಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಭವ್ಯ ಕೋಟೆ ಭಣಗುಡುತ್ತಿದೆ.

ಕೊರೊನಾ ವೈರಸ್ ನಿಯಂತ್ರಣ ಮಾಡುವ ಸಲುವಾಗಿ ಚಿತ್ರದುರ್ಗದ ಏಳು ಸುತ್ತಿನ ಕೋಟೆಗೆ ನಾಲ್ಕು ತಿಂಗಳ ಕಾಲ ಬಂದ್​ ಮಾಡಲಾಗಿತ್ತು. ಇದೀಗ ನಾಲ್ಕು ತಿಂಗಳ ಬಳಿಕ ಪ್ರವಾಸಿಗರ ಭೇಟಿಗೆ ಕೇಂದ್ರ ಪುರಾತತ್ವ ಇಲಾಖೆ ಅನುಮತಿ ನೀಡಿದೆ. ಸತತ ನಾಲ್ಕು ತಿಂಗಳ ಕಾಲ ಪ್ರವಾಸಿಗರಿಲ್ಲದೇ ಇದ್ದ ಕೋಟೆ, ಇದೀಗ ಬಾಗಿಲು ತೆರೆದಿದ್ದರೂ ಕೂಡಾ ಪ್ರವಾಸಿಗರ ಕೊರತೆ ಎದುರಿಸುತ್ತಿದೆ. ಇದಕ್ಕೆಲ್ಲ ಕಾರಣ ಮತ್ತದೇ ಕೊರೊನಾ ಭೀತಿ.

ಲಾಕ್​ಡೌನ್ ಬಳಿಕ ಚಿತ್ರದುರ್ಗದ ಕೋಟೆ ಓಪನ್

ಕೋಟೆಯೊಳಗಿರುವ ಪ್ರತಿಯೊಂದು ಸ್ಮಾರಕಗಳೂ ಪ್ರವಾಸಿಗರಿಲ್ಲದೇ ತನ್ನ ಸೌಂದರ್ಯ ಕಳೆದುಕೊಂಡಿವೆ. ಸ್ಮಾರಕಗಳ ಬಳಿ ಸದಾ ಇತಿಹಾಸವನ್ನು ಪ್ರವಾಸಿಗರಿಗೆ ತಿಳಿಸುತ್ತ ಮೊಕ್ಕಾಂ ಹೂಡುತ್ತಿದ್ದ ಗೈಡ್​ಗಳಿಲ್ಲದೇ ಸ್ಮಾರಕಗಳು ಭಣಗುಡುತ್ತಿವೆ. ಪ್ರವಾಸಿಗರಿಲ್ಲದೇ ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿರುವವರ ಬದುಕು ತತ್ತರಿಸಿಹೋಗಿದ್ದು, ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ.‌

ಈಗಾಗಲೇ ಕಳೆದೆರಡು ದಿನಗಳ ಹಿಂದೆ ಐತಿಹಾಸಿಕ ಕೋಟೆ ಬಾಗಿಲನ್ನು ತೆರೆಯಲು‌ ಕೇಂದ್ರ ಪುರಾತತ್ವ ಇಲಾಖೆ ಗ್ರೀನ್ ಸಿಗ್ನಲ್ ನೀಡಿದ್ದರಿಂದ ಪ್ರವಾಸಿಗರ ಭೇಟಿಗೆ ಅನುಮತಿ ಕಲ್ಪಿಸಲಾಗಿದೆ. ಈಗಾಗಲೇ ಬೆರಳಣಿಕೆಯಷ್ಟು ಪ್ರವಾಸಿಗರು ಆಗಮಿಸುತ್ತಿದ್ದು, ಸ್ಮಾರಕಗಳ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಆದರೆ ಪುರಾತತ್ವ ಇಲಾಖೆ ನಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ABOUT THE AUTHOR

...view details