ಚಿತ್ರದುರ್ಗ: ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಗೆಲುವು ಸಾಧಿಸಿ ನಾನಾ ಖಾತೆಗಳಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಮಾಜಿ ಸಚಿವ ಡಿ. ಮಂಜುನಾಥ್ ನಿಧನರಾಗಿದ್ದಾರೆ.
ದೀರ್ಘ ಕಾಲದ ಆರೋಗ್ಯ ಸಮಸ್ಯೆಯಿಂದ ತಮ್ಮ ತೋಟದಮನೆಯಲ್ಲಿ ಕಾಲ ಕಳೆಯುತ್ತಿದ್ದ ಡಿ. ಮಂಜುನಾಥ್ ರಾಜಕೀಯದಿಂದ ತಟಸ್ಥರಾಗಿದ್ದರು. ತಮ್ಮ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆ ಬೆಂಗಳೂರು ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಇಂದು ಮಧ್ಯಾಹ್ನ 3:30ರ ಸುಮಾರಿಗೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಮೂವರು ಗಂಡು ಮಕ್ಕಳು ಹಾಗೂ ಮೊಮ್ಮಕ್ಕಳನ್ನಗಲಿದ್ದಾರೆ.
ಡಿ.ಮಂಜುನಾಥ್ ರಾಜಕೀಯ ಹಾದಿ:26ನೇ ಅಗಸ್ಟ್ 1928 ರಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜಾಜೂರ್ ಗ್ರಾಮದಲ್ಲಿ ಜನಿಸಿದರು. ಬಿಎಸ್ಸಿ, ಬಿ.ಎಲ್ ಪದವಿ ಪಡೆದಿದ್ದರು. 1959ರಲ್ಲಿ ತಾಲೂಕು ಮಂಡಳಿ ಚುನಾವಣೆಯಲ್ಲಿ ಸ್ಪರ್ಧಿಸಿ ಮೈಸೂರು ರಾಜ್ಯದ ಯುವ ರೈತರ ಸಂಘದ ಸದಸ್ಯರಾದರು ಮತ್ತು ಹಲವಾರು ವರ್ಷಗಳ ಕಾಲ ಕೆಲಸ ಮಾಡಿದರು.
ಬಳಿಕ ಚಿತ್ರದುರ್ಗದಲ್ಲಿ ಹಲವಾರು ಹಾಸ್ಟೆಲ್ ಸಮಿತಿಯ ಸದಸ್ಯರಾಗಿದ್ದರು. ನಾಲ್ಕನೇ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ (1967) ಹಿರಿಯೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿ ವಿಧಾನಸಭೆಯ ಉಪ ಸ್ಪೀಕರ್ ಆಗಿ ನೇಮಕವಾಗಿ ಕಾರ್ಯನಿರ್ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯೂ ಕೂಡಾ ಆಗಿದ್ದರು.
ಮೈಸೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾಗಿ ಕೆಲಸ ಮಾಡಿದ್ದರು. ಬಳಿಕ 1977 ರಲ್ಲಿ ಜನತಾ ಪಕ್ಷಕ್ಕೆ ಸೇರುವ ಮೂಲಕ ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಜನತಾ ಪಕ್ಷದ ಅಧ್ಯಕ್ಷರಾಗಿ 3 ವರ್ಷ ಕೆಲಸ ಮಾಡಿದ್ದರು. 1983 ರಲ್ಲಿ ಶಾಸಕಾಂಗ ಪರಿಷತ್ತಿನ ಸದಸ್ಯರಾಗಿ ನಾಮ ನಿರ್ದೇಶನಗೊಂಡು 1984 ರ ಅಗಸ್ಟ್ 18 ರಿಂದ ಯೋಜನಾ, ಸಂಸ್ಥೆಗಳ ಸಚಿವರಾಗಿ ಕೆಲಸ ಮಾಡಿದ್ದರು.
1985 ರ ಮಾರ್ಚ್‌ನಲ್ಲಿ ಮತ್ತೆ ಕಾರ್ಮಿಕ ಸಚಿವರಾಗಿದ್ದರು. ಜುಲೈ18, 1986 ರಿಂದ 1987ರ ಅಗಸ್ಟ್ 26ರವರೆಗೆ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಪ್ರದೇಶ ಜನತಾ ಪಕ್ಷದ ಅಧ್ಯಕ್ಷರಾದ ಮೊದಲ ಪರಿಶಿಷ್ಟ ಜಾತಿ ವ್ಯಕ್ತಿ ಮತ್ತು ಅಧ್ಯಕ್ಷರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಡಿ ಮಂಜುನಾಥ್ ಸೆಪ್ಟೆಂಬರ್ 2, 1987 ರಂದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಆಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದರು.