ಚಿತ್ರದುರ್ಗ: ಬಯಲುಸೀಮೆ ನಾಡಿಗೆ ನೀರಾವರಿ ಜಾರಿ ಮಾಡುವಂತೆ ಅನ್ನದಾತರು ಹಲವು ವರ್ಷಗಳ ಕಾಲ ಹೋರಾಟ ಮಾಡಿದ್ದರು. ರೈತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ನೀರು ಹರಿಸಲು ಹಸಿರು ನಿಶಾನೆ ತೋರಿತು. ಆದರೆ ಅದೆ ಕಾಲುವೆಯಿಂದ ಕೋಟೆನಾಡಿನ ಕೆಲವು ಗ್ರಾಮಗಳ ಅನ್ನದಾತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಜಿಲ್ಲೆಯಲ್ಲಿ ಕಳೆದ 13 ವರ್ಷಗಳಿಂದ ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣದ ಕಾಮಗಾರಿ ಚಾಲ್ತಿಯಲ್ಲಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಲು ಚಿತ್ರದುರ್ಗ ನಗರದಲ್ಲಿ ಭದ್ರಾ ಮೇಲ್ದಂಡೆ ಕಚೇರಿ ಕೂಡ ಸ್ಥಾಪಿಸಲಾಗಿದೆ. ಇತ್ತ ಹೊಸದುರ್ಗ ತಾಲೂಕಿನ ಗೂಳಿಹಟ್ಟಿ, ಮಲ್ಲಪ್ಪನಹಳ್ಳಿ, ಮಧುರೆ ಗ್ರಾಮಗಳು ಸೇರಿದಂತೆ ಹಲವು ಭಾಗದಲ್ಲಿ ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದ್ದು, ಇನ್ನೊಂದೆಡೆ ಕಾಲುವೆಗೆಗಾಗಿ ಕೊರೆದಿರುವ ಸುರಂಗಗಳಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗ್ತಿದೆ.
ಈ ಕುರಿತಂತೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ರೈತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಕಳೆದ ವಾರ ನಡೆದ ಸದನದಲ್ಲಿ ಧ್ವನಿಯೆತ್ತಿದ್ದರು. ಹೊಸದುರ್ಗ ತಾಲೂಕಿನಲ್ಲಿ ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣದಿಂದ ಅಂತರ್ಜಲ ಮಟ್ಟ ಕುಸಿತದಿಂದ 8000 ಎಕರೆ ಭೂಮಿ ಬೆಳೆ ಬೆಳೆಯಲು ಕಷ್ಟ ಅನುಭವಿಸುವಂತಾಗಿದೆ. ಸರ್ಕಾರ ತಾಲೂಕಿನ ಕೆರೆಗಳನ್ನು ತುಂಬಿಸುವಂತೆ ಮುಖ್ಯಮಂತ್ರಿ ಬಿಎಸ್ವೈ ಅವರಿಗೆ ಚಿತ್ರದುರ್ಗ ಶಾಸಕ ಒತ್ತಾಯಿಸಿದರು.