ಚಿತ್ರದುರ್ಗ: ಆರೋಗ್ಯ ಸಚಿವ ಶ್ರೀರಾಮುಲು ಅವರ ಕ್ಷೇತ್ರದಲ್ಲಿ ವೈದ್ಯರ ನಿರ್ಲಕ್ಷ್ಯತನ ಮುಂದುವರೆದಿದೆ. ಕೆಮ್ಮು, ನೆಗಡಿ ಎಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರಿಗೆ ಸಕಾಲದಲ್ಲಿ ಸರಿಯಾದ ಚಿಕಿತ್ಸೆ ನೀಡದೆ ಜಿಲ್ಲಾಸ್ಪತ್ರೆಯ ವೈದ್ಯರು ನಿರ್ಲಕ್ಷ್ಯವಹಿಸಿ ಸಾವಿಗೀಡಾಗುವಂತೆ ಮಾಡಿದ್ದಾರೆಂದು ಕುಟುಂಬದ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ.
ಆಸ್ಪತ್ರೆ ಸೇರಿ 4 ದಿನ ಕಳೆದ್ರೂ ಸಿಗದ ಚಿಕಿತ್ಸೆ: ರೋಗಿ ಸಾವಿಗೆ ವೈದ್ಯರ ನಿರ್ಲಕ್ಷ್ಯ ಆರೋಪ - ಚಿತ್ರದುರ್ಗ ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯ
ಕೆಮ್ಮು, ನೆಗಡಿ ಎಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರಿಗೆ ಸರಿಯಾದ ಚಿಕಿತ್ಸೆ ನೀಡದೆ ಜಿಲ್ಲಾಸ್ಪತ್ರೆಯ ವೈದ್ಯರು ನಿರ್ಲಕ್ಷ್ಯ ವಹಿಸಿ ಸಾವಿಗೀಡಾಗುವಂತೆ ಮಾಡಿದ್ದಾರೆಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಚಿತ್ರದುರ್ಗ ನಗರದ ಮಾಸ್ತಮ್ಮ ಬಡಾವಣೆಯ ನಿವಾಸಿ ಬಸವರಾಜಪ್ಪ ಎಂಬುವವರಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಆದರೆ ಮೂರ್ನಾಲ್ಕು ದಿನಗಳಾದ್ರೂ ಪರೀಕ್ಷಾ ವರದಿ ಮಾತ್ರ ಸಂಬಂಧಿಕರ ಕೈ ಸೇರಲಿಲ್ಲ. ವರದಿ ಬರುವ ತನಕ ಸಮಯ ವ್ಯರ್ಥ ಮಾಡಿರುವ ವೈದ್ಯರು ಬಸವರಾಜಪ್ಪನವರು ಸಾವನ್ನಪ್ಪಿದ ಬಳಿಕ ಅವರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಿರುವುದು ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮನೆಯ ಹಿರಿಯರನ್ನು ಕಳೆದುಕೊಂಡ ಸಂಬಂಧಿಕರು ವೈದ್ಯರೊಂದಿಗೆ ವಾಗ್ವಾದಕ್ಕಿಳಿದರು. ಕೊರೊನಾ ನೆಗೆಟಿವ್ ಇದೆ ಎಂದಾದ್ರೆ ನಾವು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಮ್ಮ ತಂದೆಯ ಪ್ರಾಣ ಉಳಿಸಿಕೊಳ್ಳುತ್ತಿದ್ದೆವು. ವರದಿ ಜನಸಾಮಾನ್ಯರಿಗೆ ನೀಡಲು ಸಮಯ ವ್ಯರ್ಥ ಮಾಡುತ್ತಿರುವ ವೈದ್ಯರು ಅದೇ ರಾಜಕಾರಣಿಗಳ ಕೊರೊನಾ ವರದಿ ಒಂದು ಗಂಟೆಯಲ್ಲಿ ನೀಡುತ್ತಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.