ಚಿತ್ರದುರ್ಗ:ರಾಜ್ಯ ಸರ್ಕಾರ ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಲಾಕ್ಡೌನ್ ಅಸ್ತ್ರ ಬಳಕೆ ಮಾಡಿತ್ತು. ಅದ್ರೆ ಜಿಲ್ಲೆಯಲ್ಲಿ ಲಾಕ್ಡೌನ್ ಅನ್ನು ಬಂಡವಾಳ ಮಾಡಿಕೊಂಡ ಹಲವು ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯ ವಿವಾಹ ಮಾಡಲು ಮುಂದಾಗಿದ್ದರು. ಆ ಪೋಷಕರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸುವ ಮೂಲಕ ಸುಮಾರು 50ಕ್ಕೂ ಹೆಚ್ಚು ಬಾಲ್ಯ ವಿವಾಹಗಳನ್ನು ತಡೆ ಹಿಡಿದಿದ್ದಾರೆ.
ಲಾಕ್ಡೌನ್ ವೇಳೆ ರಾತ್ರಿ 12ರಿಂದ ಬೆಳಗ್ಗೆ ನಾಲ್ಕು ಗಂಟೆಯ ಒಳಗೆ ಬಾಲ್ಯವಿವಾಹಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಕಳೆದ ಮಾರ್ಚ್ನಿಂದ ಇಲ್ಲಿಯವರೆಗೆ ಯಾರಿಗೂ ತಿಳಿಯದ ಹಾಗೆ ಬಾಲ್ಯ ವಿವಾಹವನ್ನು ಮಾಡಿ ಮುಗಿಸಲಾಗಿದೆ. ಮಕ್ಕಳ ಸಹಾಯವಾಣಿ 1098ಕ್ಕೆ ಬಂದ ಕರೆಗಳನ್ನು ಆಧರಿಸಿ ಪೋಲಿಸ್ ಇಲಾಖೆ ಸೇರಿದಂತೆ ಶಿಶು ಅಭಿವೃದ್ಧಿ ಯೋಜನೆಯ ಅಧಿಕಾರಿಗಳು, ಹಾಗೂ ಬಸವೇಶ್ವರ ಸಂಸ್ಥೆಯ ಮಕ್ಕಳ ಕುಟಿರದ ಕಾರ್ಯದರ್ಶಿ ಶಂಕರಪ್ಪನವರು ಜಂಟಿಯಾಗಿ ದಾಳಿ ನಡೆಸಿ ಹಲವಾರು ಬಾಲ್ಯ ವಿವಾಹಗಳನ್ನು ತಡೆಹಿಡಿದಿದ್ದಾರೆ.
ಇಲ್ಲಿಯ ತನಕ ಒಟ್ಟು ಪೋಕ್ಸೋ ಆ್ಯಕ್ಟ್ ಅಡಿಯಲ್ಲಿ 30 ಪ್ರಕರಣಗಳು ದಾಖಲಾಗಿವೆ. ಕೆಲ ಪೋಷಕರಿಗೆ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕಾರಣ ಕೇಳಿ ನೋಟಿಸ್ ನೀಡಿದ್ದು, ತನಿಖೆ ಮುಂದುವರೆದಿದೆ.