ಚಿತ್ರದುರ್ಗ: ಚಿತ್ರದುರ್ಗ ನಗರದ ಬಹುತೇಕ ರಸ್ತೆಗಳ ಸಿಸಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಆರಂಭವಾಗಿ ವರ್ಷವೇ ಕಳೆದರೂ ಈವರೆಗೆ ಕಾಮಗಾರಿ ಪೂರ್ಣಗೊಳ್ಳದೇ ಇರುವುದಕ್ಕೆ ನಗರ ನಿವಾಸಿಗಳು ಹಾಗೂ ಪ್ರವಾಸಿಗರು ಪರದಾಟ ನಡೆಸುವಂತಾಗಿದೆ.
ನಗರದ ಚಳಕೆರೆ ಗೇಟ್ ಮಾರ್ಗವಾಗಿ ಪ್ರವಾಸಿ ಮಂದಿರ, ಹಲವು ಜಿಲ್ಲಾಸ್ಪತ್ರೆ ಸೇರಿದಂತೆ ಸಾರ್ವಜನಿಕ ಕಚೇರಿಗಳಿವೆ. ಜಿಲ್ಲೆಯ ಜನತೆ ಕಚೇರಿ ಕಾರ್ಯಗಳಿಗಾಗಿ ಬರಬೇಕೆಂದರೆ ಇದೇ ರಸ್ತೆಯಲ್ಲಿ ಸಾಗಬೇಕಿದ್ದು, ಒಂದೇ ರಸ್ತೆಯಲ್ಲಿ ದ್ವಿಮುಖ ಸಂಚಾರದಲ್ಲಿ ಬರಬೇಕಿದೆ. ಹೀಗಾಗಿ ಸ್ವಲ್ಪ ಆಯ ತಪ್ಪಿದರೂ ಕಾಮಗಾರಿ ಸ್ಥಳದಲ್ಲಿ ಬಿದ್ದು ಪ್ರಾಣಕ್ಕೆ ಕುತ್ತು ತಂದುಕೊಳ್ಳುವ ಭಯ ಜನರಲ್ಲಿ ಕಾಡುತ್ತಿದೆ.
ಕಾಮಗಾರಿ ಪೂರ್ಣಗೊಳಿಸುವ ಕುರಿತು ಸಾರ್ವಜನಿಕರು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಇಂದು ಮುಗಿಯುತ್ತೆ, ನಾಳೆ ಮುಗಿಯುತ್ತದೆ ಎಂದು ಹೇಳಿಕೊಂಡು ಬಂದಿದ್ದಾರಂತೆ. ಒಂದೂವರೆ ವರ್ಷಗಳಿಂದ ಆಮೆಗತಿಯಲ್ಲಿ ಸಿಸಿ ರಸ್ತೆ ಕಾಮಗಾರಿ ಸಾಗುತ್ತಿದೆಯೆಂದು ಸಾರ್ವಜನಿಕರು ಅಧಿಕಾರಿಗಳ ಮೇಲೆ ದೂರುತ್ತಿದ್ದಾರೆ.
ಹೆಚ್ಚುತ್ತಿರುವ ಧೂಳು:
ಬಸ್ ನಿಲ್ದಾಣ ರಸ್ತೆ, ರೈಲು ನಿಲ್ದಾಣದ ರಸ್ತೆ ಸೇರಿದಂತೆ ಹಲವು ಕಡೆ ಈಗಾಗಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ನಿತ್ಯವೂ ಕಾಮಗಾರಿ ಪಕ್ಕದ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿರುವುದರಿಂದ ನಗರದಲ್ಲಿ ಧೂಳು ಹೆಚ್ಚಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಅಲ್ಲದೇ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನಗರ ನಿವಾಸಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ.