ಚಿತ್ರದುರ್ಗ:ಕೋಟೆನಾಡಿನಲ್ಲಿ ಈಗಾಗಲೇ ಮಳೆ ಇಲ್ಲದೆ, ಅಂತರ್ಜಲ ಕುಗ್ಗಿ ಹೋಗಿ ಕೊಳವೆ ಬಾವಿಗಳು ನೀರಿನೊಂದಿಗೆ ಸಂಪರ್ಕವನ್ನೇ ಕಳೆದುಕೊಂಡಿವೆ. ಅಂತಹ ಕೊಳವೆ ಬಾವಿಗಳಿಗೆ ಮರು ಜೀವ ಕಾರ್ಯವನ್ನು ಜಲತಜ್ಞ ದೇವರಾಜ್ ರೆಡ್ಡಿ ಸದ್ದಿಲ್ಲದೆ ಮಾಡುತ್ತಿದ್ದಾರೆ.
ಇವರು ಚಿತ್ರದುರ್ಗ ಭಾಗದಲ್ಲಿ ಬೋರ್ವೆಲ್ ರಿಚಾರ್ಜ್ ಮಾಡುವ ಕಾರ್ಯದಿಂದ ಎಷ್ಟೋ ರೈತರು ಇಂದಿಗೂ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದು, ಚಿತ್ರದುರ್ಗ ಜಿಲ್ಲೆ ಹೊರತುಪಡಿಸಿ ಹೊರ ರಾಜ್ಯಗಳಲ್ಲೂ ದೇವರಾಜ ರೆಡ್ಡಿ ಕೂಡ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಇಲ್ಲಿಯವರೆಗೆ 150ಕ್ಕೂ ಹೆಚ್ಚು ಕೊಳವೆ ಬಾವಿಗಳಿಗೆ ರಿಚಾರ್ಜ್ ಮೂಲಕ ಮರು ಜೀವ ನೀಡಿ ರೈತರ ಮೊಗದಲ್ಲಿ ಮಂದಹಾಸ ಮನೆ ಮಾಡುವಂತೆ ಮಾಡಿರುವ ಇವರ ಕಾರ್ಯಕ್ಕೆ ಸಾಕಷ್ಟು ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಳೆ ಕಡಿಮೆ ಬೀಳುವ ಪ್ರದೇಶಗಳಲ್ಲಿ ಅಂತರ್ಜಲವನ್ನೇ ಜನರು ಹೆಚ್ಚಾಗಿ ನೆಚ್ಚಿಕೊಂಡಿದ್ದು, ದೇವರಾಜ್ ರೆಡ್ಡಿ ಇವರ ಪಾಲಿಗೆ ರಕ್ಷಕರಾಗಿದ್ದಾರೆ. ಇದರ ಜೊತೆಗೆ ಸರ್ಕಾರ ನೀಗಿಸದ ನೀರಿನ ಕೊರತೆಯನ್ನು ಅಲ್ಪಸ್ವಲ್ಪ ಮಟ್ಟಿಗೆ ಇವರು ನೀಗಿಸುತ್ತಿದ್ದು, ರೈತರು ಹಾಗೂ ಹಲವು ಸಂಘಟನೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.