ಚಿತ್ರದುರ್ಗ:ಜಿಲ್ಲೆಯಲ್ಲಿನಿತ್ಯ ಒಂದಲ್ಲ ಒಂದು ಸರಗಳ್ಳತನ, ಮಹಿಳೆಯರ ಮೇಲೆ ದೌರ್ಜನ್ಯ, ಕಿರುಕುಳ ಹೀಗೆ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಇವೆಲ್ಲವುಗಳಿಗೆ ಬ್ರೇಕ್ ಹಾಕಿ ಅಪರಾಧ ಕೃತ್ಯದಲ್ಲಿ ಭಾಗಿಯಾಗುವವರಿಗೆ ಬಿಸಿ ಮುಟ್ಟಿಸಲು ಪೊಲೀಸ್ ಬೈಕ್ಗಳು ರೋಡಿಗಿಳಿದಿವೆ.
ಹೌದು, ಭಾರತ ಸರ್ಕಾರದ ನಿರ್ಭಯ ಯೋಜನೆ ಅಡಿಯಲ್ಲಿ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ 21 ಪೊಲೀಸ್ ಠಾಣೆಗಳಿಗೆ 23 ಹೀರೋ ಗ್ಲಾಮರ್ ಡಿಸ್ಕ್ ಸೆಲ್ಫ್ ಕಾಸ್ಟ್ ಬಿಎಸ್ನ 6 ದ್ವಿಚಕ್ರ ವಾಹನಗಳನ್ನು ಗಸ್ತು ತಿರುಗಲು ಎಸ್ಪಿ ಜಿ.ರಾಧಿಕಾ ಸಿಬ್ಬಂದಿಗೆ ವಿತರಿಸಿದರು. ಎಲ್ಲಾ ಠಾಣೆಗಳಿಗೆ ತಲಾ ಒಂದರಂತೆ ಹಾಗೂ ಮಹಿಳಾ ಠಾಣೆಗೆ 2 ಬೈಕ್ ಈಗಾಗಲೇ ಎಸ್ಪಿ ಜಿ.ರಾಧಿಕಾ ನೀಡಿದ್ದು, ಇಂದಿನಿಂದ ಮಾನವ ಕಳ್ಳಸಾಗಾಣಿಕೆ, ಯುವತಿಯರನ್ನು ಚುಡಾಯಿಸುವುದನ್ನು ತಡೆಯಲು ಮಹಿಳಾ ಮತ್ತು ಮಕ್ಕಳ ರಕ್ಷಣೆಗೆ ಪೊಲೀಸ್ ಸಿಬ್ಬಂದಿ ದಿನದ 24 ಗಂಟೆಗಳ ಗಸ್ತು ತಿರುಗಲಿದ್ದಾರೆ.
ಖದೀಮರೇ ಎಚ್ಚರ:ಯುವತಿಯರಿಗೆ ಕಿರುಕುಳ, ಸರಗಳ್ಳತನ ಸೇರಿದಂತೆ ಮುಂತಾದ ಕೃತ್ಯಗಳಲ್ಲಿ ಭಾಗಿಯಾಗುವ ಖದೀಮರಿಗೆ ಬಿಸಿ ಮುಟ್ಟಿಸಲು ಈಗಾಗಲೇ ದ್ವಿಚಕ್ರ ವಾಹನಗಳು ರೋಡಿಗಿಳಿದಿವೆ. ಯಾವುದೇ ಕೃತ್ಯಗಳು ನಡೆದ ತಕ್ಷಣವೇ ಮಹಿಳೆಯರ ರಕ್ಷಣೆಗೆ ನಿಲ್ಲಲು ಹಾಗೂ ಖದೀಮರ ಹೆಡೆಮುರಿ ಕಟ್ಟಲು ರಕ್ಷಾ ಕವಚದಂತೆ ಕಾರ್ಯನಿರ್ವಹಿಸಲು ಎಸ್ಪಿ ಜಿ.ರಾಧಿಕಾ ಹಾಗೂ ಹೆಚ್ಚುವರಿ ಎಸ್ಪಿ ಮಹಾನಿಂಗ ನಂದಗಾವಿ ದ್ವಿಚಕ್ರ ವಾಹನಗಳಿಗೆ ಹಸಿರು ನಿಶಾನೆ ತೋರಿದರು.