ಚಿತ್ರದುರ್ಗ: ಇದು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಗ್ರಾಮ. ಆ ಗ್ರಾಮದ ಜನರು ಹಲವು ವರ್ಷಗಳಿಂದ ಸೇತುವೆ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ ಅಧಿಕಾರಿಗಳು ಕೆಳಸೇತುವೆ ನಿರ್ಮಾಣ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು, ಗ್ರಾಪಂ ಚುನಾವಣೆಯಲ್ಲಿ ಮತ ಸಲಾಯಿಸದೆ ದೂರ ಉಳಿಯಲು ನಿರ್ಧರಿಸಿದ್ದಾರೆ.
ಚಿತ್ರದುರ್ಗ ತಾಲೂಕಿನ ವಿಜಾಪುರ ಗ್ರಾಮಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸೇತುವೆ ನಿರ್ಮಾಣಕ್ಕೆ ಇಲ್ಲಿನ ನಿವಾಸಿಗಳು ಹಲವು ಬಾರಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ, ಜಿಲ್ಲಾಡಳಿತ ಹಾಗೂ ತಾಲೂಕಾಡಳಿತಕ್ಕೆ ಮನವಿ ಮಾಡಿದ್ದರು. ಆದರೆ ಯಾವುದೇ ಅಧಿಕಾರಿಗಳು ಇವರ ಸಮಸ್ಯಗೆ ಸ್ಪಂದಿಸಿರಲಿಲ್ಲ. ಇದರಿಂದ ಕೋಪಗೊಂಡಿರುವ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ.
ವಿಜಾಪುರ ಗ್ರಾಮಕ್ಕೆ ಸುಮಾರು 200 ವರ್ಷಗಳ ಇತಿಹಾಸವಿದೆ. ಈ ಗ್ರಾಮದಲ್ಲಿ ಸುಮಾರು 1500 ಜನರು ವಾಸವಾಗಿದ್ದು, ಈ ಪೈಕಿ 1000 ಮತಗಳಿವೆ. ಆದರೂ ಸಹ ಯಾವೊಬ್ಬ ಅಧಿಕಾರಿಗಳು ನಮ್ಮ ಸಮಸ್ಯೆ ಆಲಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೃಷಿ ಚುವಟಿಕೆಗೆ ಅಡತಡೆ, ಸ್ಪಲ್ಪ ಮೈ ಮರೆತರೂ ಪ್ರಾಣಾಪಾಯ:
ಗ್ರಾಮಸ್ಥರ ಬಹುತೇಕ ಕೃಷಿ ಜಮೀನುಗಳು ಹೆದ್ದಾರಿ ಪಕ್ಕದಲ್ಲಿದ್ದು, ಹೆದ್ದಾರಿಯನ್ನು ದಾಟಿಕೊಂಡೇ ಹೋಗಬೇಕು. ಹೀಗೆ ರಸ್ತೆ ದಾಟುವಾಗ ಕೆಲವೊಮ್ಮೆ ಗ್ರಾಮಸ್ಥರಿಗೆ ಹಾಗೂ ಸಾಕು ಪ್ರಾಣಿಗಳಿಗೆ ಪ್ರಾಣಾಪಾಯ ಸಂಭವಿಸಿದೆಯಂತೆ. ಇತ್ತ ಈ ಗ್ರಾಮದ ಪಕ್ಕದ ಬಳಗಟ್ಟೆ, ಮಳೆನಳ್ಳಿ, ಕಬ್ಬಗೇರಿ, ಗೊಲ್ಲರಹಟ್ಟಿ, ಕಲಕುಂಟೆ ಸೇರಿದಂತೆ 8 ಗ್ರಾಮಗಳ ಜನತೆ ನಿತ್ಯ ಈ ಗ್ರಾಮಕ್ಕೆ ಆಗಮಿಸುತ್ತಾರೆ. ಆದರೆ ಸೇತುವೆ ಇಲ್ಲದ ಕಾರಣ ನಿತ್ಯವೂ 4 ಕಿ.ಮೀ. ಸುತ್ತುವರೆದು ಬರುವಂತಾಗಿದೆ ಎಂಬುದು ಗ್ರಾಮಸ್ಥರು ಆರೋಪಿಸಿದ್ದಾರೆ.