ಚಳ್ಳಕೆರೆ (ಚಿತ್ರದುರ್ಗ) : ಮದ್ಯಪಾನ ಮಾಡಿ ಪದೇ ಪದೇ ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯತ್ ಪಿಡಿಒ ಎಸ್.ಹನುಮಂತಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಜನವರಿ 7 ರ ಬೆಳಗ್ಗೆ 11:15ರ ಸುಮಾರಿಗೆ ಅಧಿಕಾರಿಯು ಮದ್ಯ ಸೇವಿಸಿ ಚಳ್ಳಕೆರೆ ನಗರದ ಬಸ್ ನಿಲ್ದಾಣದಲ್ಲಿ ಮಲಗಿದ್ದರು. ಈ ಹಿಂದೆ ಘನತ್ಯಾಜ್ಯ ನಿರ್ವಹಣೆ, ಕಸ ಸಂಗ್ರಹಣೆಯ ವಾಹನ ಬಳಕೆ ಮಾಡದೇ, ಜನ ಸಂಜೀವಿನಿ ಕ್ರಿಯಾ ಯೋಜನೆ ತಯಾರಿಸದೇ, ಕರ್ತವ್ಯಕ್ಕೆ ಗೈರು ಸೇರಿದಂತೆ ವಿವಿಧ ಕಾರಣಕ್ಕೆ ಇವರಿಗೆ ಸೆಪ್ಟಂಬರ್ 17, 2022ರಂದು ತಾಲೂಕು ಪಂಚಾಯತ್ ಕಾರ್ಯಾಲಯದಿಂದ ನೋಟಿಸ್ ಜಾರಿ ಮಾಡಲಾಗಿತ್ತು. ಈ ನೋಟಿಸ್ಗೂ ಇವರು ಯಾವುದೇ ಉತ್ತರ ನೀಡಿರಲಿಲ್ಲ.
ಅಂದಿನ ಜಿಲ್ಲಾ ಪಂಚಾಯತ್ನ ಸಿಇಒ ಡಾ.ಕೆ.ನಂದಿನಿದೇವಿ ಅವರು (23-9-2022) ಎಸ್.ಹನುಮಂತ್ ಕುಮಾರ್ ಅವರನ್ನು ಅಮಾನತು ಮಾಡಿದ್ದರು. 1 ತಿಂಗಳ ಕಾಲವಧಿಯ ನಂತರ ಗ್ರಾಮ ಪಂಚಾಯತಿಗೆ ಪುನರ್ ನೇಮಕ ಮಾಡಲಾಗಿತ್ತು. ಆದರೆ ಇದೀಗ ಮದ್ಯ ಸೇವನೆ ಮಾಡಿ ಮತ್ತೆ ಸಿಕ್ಕಿಬಿದ್ದಿದ್ದಾರೆ. ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯತಿಯ ಹಾಜರಾತಿ ಪರಿಶೀಲಿಸಿದಾಗ ಈ ಅಧಿಕಾರಿ ದಿನಾಂಕ 06.01.2023 ರಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿರುವುದು ಕಂಡುಬಂದಿದೆ.
ಕಾರ್ಯಾವಧಿಯಲ್ಲಿ ಮದ್ಯಪಾನ ಮಾಡಿ ಸಾರ್ವಜನಿಕರ ಸೇವೆಗಳಿಗೆ ಸ್ಪಂದಿಸದೇ ಇರುವುದು, ಕಚೇರಿಗೂ ಹಾಜರಾಗದೇ ನಾಗರಿಕರಿಗೆ ಇ-ಸ್ವತ್ತು ಸೌಲಭ್ಯ ನೀಡದೇ ಇರುವುದು, ಗ್ರಾಮದಲ್ಲಿನ ಕುಡಿಯುವ ನೀರಿನ ಸೌಕರ್ಯ ನೀಡದೇ ಸಾರ್ವಜನಿಕರಿಗೆ ತೊಂದರೆ ನೀಡಿದ ಗುರುತರ ಆರೋಪ ಪಿಡಿಒ ಎಸ್.ಹನುಮಂತಕುಮಾರ್ ಮೇಲಿದೆ. ಹೀಗಾಗಿ ಇದೀಗ ಮತ್ತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.