ಚಿತ್ರದುರ್ಗ: ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ, ಜೈಲಲ್ಲೇ ಕುಳಿತು ಆತ ಮಾಡಿದ್ದು ಅಂತಿಂಥ ಕೆಲಸವಲ್ಲ. ಅವನ ಖತರ್ನಾಕ್ ಕೆಲಸಕ್ಕೆ ಪೊಲೀಸ್ ಇಲಾಖೆಯೇ ಬೆಚ್ಚಿಬಿದ್ದಿದೆ. ಕೈದಿಯ ಆ ಕೃತ್ಯಕ್ಕೆ ಕೋಟೆ ನಾಡು ಚಿತ್ರದುರ್ಗದ ಅಧಿಕಾರಿಗಳು ಕಂಗಾಲಾಗಿದ್ದಾರೆ.
ಹೌದು, ಮುರಿಗೆಪ್ಪ ನಿಂಗಪ್ಪ ಕುಂಬಾರ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ವಿಚಾರಣಾಧಿನ ಕೈದಿ. ಈತ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ಕೊಂಡು ಮೊಬೈಲ್ ಮೂಲಕ ಚಿತ್ರದುರ್ಗ ಜಿಲ್ಲೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ಫೋನ್ ಮಾಡಿ ಬ್ಲ್ಯಾಕ್ ಮೇಲ್ ಮಾಡ್ತಿದ್ದ. ನಾನು ಎಸಿಬಿ ಡಿವೈಎಸ್ಪಿ ಬಸವರಾಜ್ ಮಾತಾಡ್ತಾ ಇದ್ದೀನಿ. ನಾಳೆ ನಿಮ್ಮ ಕಚೇರಿ, ಮನೆ ಮೇಲೆ ಎಸಿಬಿ ರೇಡ್ ಆಗುತ್ತೆ. ಟೆನ್ಶನ್ ತಗೊಳ್ಳಬೇಡಿ, ನಾನಿದ್ದೀನಿ ನಿಮ್ಮನ್ನ ಬಚಾವ್ ಮಾಡ್ತೀನಿ. ಅಕೌಂಟ್ ನಂಬರ್ ಕಳಿಸ್ತಿನಿ ಹಣ ಹಾಕಿ ಅಂತ ಅಧಿಕಾರಿಗಳಿಗೆ ಬೇಡಿಕೆ ಇಟ್ಟಿದ್ದ ಎಂಬ ಮಾಹಿತಿ ಹೊರಬಿದ್ದಿದೆ.
ಜೈಲಿನಲ್ಲಿದ್ದುಕೊಂಡೇ ಅಧಿಕಾರನ್ನು ಬೆಚ್ಚಿಬೀಳಿಸಿದ 'ಮುರಿಗೆಪ್ಪ' ಚಿತ್ರದುರ್ಗ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಸತೀಶ್ ರೆಡ್ಡಿಗೆ ಮಾರ್ಚ್ 18 ರಂದು ಕರೆ ಮಾಡಿದ್ದ ಮುರಿಗೆಪ್ಪ ತಾನು ಎಸಿಬಿ ಡಿವೈಎಸ್ಪಿ ಅಂತ ಪರಿಚಯ ಮಾಡಿಕೊಂಡು ಬ್ಲ್ಯಾಕ್ಮೇಲ್ ಮಾಡೋಕೆ ಮುಂದಾಗಿದ್ದ. ಈ ಮೊದಲೇ ಎಸಿಬಿ ಡಿವೈಎಸ್ಪಿ ಬಸವರಾಜ್ ಬಗ್ಗೆ ಸತೀಶ್ ರೆಡ್ಡಿಗೆ ಗೊತ್ತಿದ್ದ ಕಾರಣ ತಕ್ಷಣ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಬಳಿಕ ಪೊಲೀಸರು ಪ್ರಕರಣದ ಬೆನ್ನತ್ತಿದಾಗ ಈ ಕರೆ ಬಂದಿರೋದು ಪರಪ್ಪನ ಅಗ್ರಹಾರ ಜೈಲಿನಿಂದ ಅನ್ನೋದು ಗೊತ್ತಾಗಿ ಪೊಲೀಸರೇ ಆಘಾತಕ್ಕೊಳಗಾಗಿದ್ದಾರೆ.
ಜೈಲಿನಲ್ಲಿದ್ದುಕೊಂಡು ಸಿಮ್ ಬದಲಾವಣೆ ಮಾಡ್ತಿದ್ದ ಖದೀಮ
ಜಿಲ್ಲಾ ಪಂಚಾಯತ್ ಡಿ ಎಸ್ ಮೊಹಮ್ಮದ್ ಮುಬೀನ್ ಹಾಗೂ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಮೂಡಲಗಿರಿಯಪ್ಪ ಸೇರಿದಂತೆ ಅನೇಕ ಅಧಿಕಾರಿಗಳಿಗೆ ಮುರಿಗೆಪ್ಪ ಜೈಲಿನಿಂದಲೇ ಫೋನ್ ಮಾಡಿ ಎಸಿಬಿ ಹೆಸರಲ್ಲಿ ಬ್ಲಾಕ್ಮೇಲ್ ಮಾಡಿದ್ದಾನೆ. ವಿಚಾರಣಾಧೀನ ಕೈದಿ ಮುರಿಗೆಪ್ಪ ಜೈಲಿನೊಳಗೆ ಮೊಬೈಲ್ ಮತ್ತು ವಿವಿಧ ಸಿಮ್ ಕಾರ್ಡ್ ಬಳಸುತ್ತಿದ್ದ ಬಗ್ಗೆ ಪೊಲೀಸರು ಕಾರಾಗೃಹ ಎಡಿಜಿಪಿ ಗಮನಕ್ಕೆ ತಂದಿದ್ದಾರೆ.
ಪೊಲೀಸ್ ಇಲಾಖೆಯಲ್ಲಿದ್ದ ಮುರಿಗೆಪ್ಪ ಕೈದಿ ಆಗಿದ್ದೇಗೆ?
ಮುರಿಗೆಪ್ಪ 1986 ರಿಂದ 2002 ರವರೆಗೆ ಸಿವಿಲ್ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಿದ್ದ. ಇದೇ ವೇಳೆ 10 ತಿಂಗಳ ಕಾಲ ಲೋಕಾಯುಕ್ತದಲ್ಲೂ ಕೆಲಸ ಮಾಡಿದ್ದ. ಹಾಗಾಗಿ ಎಸಿಬಿ ಹೆಸರಿನಲ್ಲಿ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ. ಈತನ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ 20 ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. ಸದ್ಯ ಚಿತ್ರದುರ್ಗ ಜಿಲ್ಲಾ ಪೊಲೀಸರು ಮುರಿಗೆಪ್ಪನ ವಿಚಾರಣೆಗೆ ಕೋರ್ಟ್ ಮುಖಾಂತರ ಬಾಡಿ ವಾರೆಂಟ್ ಪಡೆದಿದ್ದು, ಹೆಚ್ಚಿನ ವಿಚಾರಣೆ ಬಳಿಕ ಇನ್ನೂ ಎಷ್ಟು ಜನಕ್ಕೆ ಬ್ಲ್ಯಾಕ್ಮೇಲ್ ಮಾಡಿದ್ದಾನೆ ಎಂಬುದು ಗೊತ್ತಾಗಲಿದೆ.
ಪರಪ್ಪನ ಅಗ್ರಹಾರದಲ್ಲಿ ಅಕ್ರಮದ ವಾಸನೆಗೆ ಬ್ರೇಕ್ ಇಲ್ಲ:
ಪರಪ್ಪನ ಅಗ್ರಹಾರ ಜೈಲಿನಲ್ಲಿ ಆಗಾಗ್ಗೆ ಮೊಬೈಲ್ ಬಳಕೆ, ಅನೈತಿಕ ಚಟುವಟಿಕೆಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಮುರಿಗೆಪ್ಪನ ಎಸಿಬಿ ಅಧಿಕಾರಿ ಎಂಬ ಬಲೆಗೆ ಚಿತ್ರದುರ್ಗ ಜಿಲ್ಲೆಯ ಅನೇಕ ಅಧಿಕಾರಿಗಳು ಬಲಿಯಾಗಿದ್ದಾರೆ. ಕೆಲವರು ಹಣ ಕಳೆದುಕೊಂಡಿದ್ದು, ಪೊಲೀಸರ ಮುಂದೆ ಬರೋದಕ್ಕೂ ಹೆದರುತ್ತಿದ್ದಾರೆ. ಪೊಲೀಸ್ ತನಿಖೆಯಿಂದ ಯಾರ್ ಯಾರು ಹಣ ಕಳೆದುಕೊಂಡಿದ್ದಾರೆ ಅನ್ನೋ ಸತ್ಯ ಹೊರಬೀಳಬೇಕಿದೆ.