ಚಿತ್ರದುರ್ಗ: ಮುರುಘಾ ಮಠದ ಶ್ರೀಗಳ ಮೇಲಿರುವ ಆರೋಪ ಸಂಬಂಧ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನಿಗದಿತ ಕಾರ್ಯವಿಧಾನದ ಪ್ರಕಾರ ವೈದ್ಯಕೀಯ ಪರೀಕ್ಷೆ ಮಾಡಲಾಗುತ್ತದೆ. ಇದಾದ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಇದಕ್ಕೂ ಮೊದಲು ಮಾತನಾಡಿದ್ದ ಚಿತ್ರದುರ್ಗ ಎಸ್ಪಿ ಈಗಾಗಲೇ ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದೇವೆ. ಮಹಿಳಾ ವಾರ್ಡನ್ ವಿಚಾರಣೆ ನಡೆಸುತ್ತಿದ್ದೇವೆ, ಅವರನ್ನು ವಶಕ್ಕೆ ಪಡೆದಿಲ್ಲ. ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದರು.
ಇನ್ನು ಚಿತ್ರದುರ್ಗದ ಮುರುಘಾ ಶ್ರೀಗಳು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ಆರೋಪ ಪ್ರಕರಣವನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಎನ್‌ಸಿಪಿಸಿಆರ್) ಸ್ವಯಂಪ್ರೇರಿತವಾಗಿ ಪರಿಗಣಿಸಿದೆ.
ಎನ್‌ಸಿಪಿಸಿಆರ್ ಕೂಡ ವಿಚಾರಣೆ ನಡೆಸಬೇಕು ಮತ್ತು ಸಂತ್ರಸ್ತರ ಗುರುತನ್ನು ಬಹಿರಂಗಪಡಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ವಿನಂತಿಸಿದೆ. ಏಳು ದಿನಗಳೊಳಗೆ ವಿವರವಾದ ವರದಿ ನೀಡುವಂತೆಯೂ ಕೋರಿದೆ.
ಇಂದು ಸಂತ್ರಸ್ತೆಯರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪಬ್ಲಿಕ್ ಪ್ರಾಸಿಕ್ಯೂಟರ್ ಆಕ್ಷೇಪಣೆಗಳನ್ನು ಸಲ್ಲಿಸಲು ಸಮಯ ತೆಗೆದುಕೊಂಡಿದ್ದರು.