ಚಿತ್ರದುರ್ಗ:ಬಿಸಿಲು ಲೆಕ್ಕಿಸದೇ ಬೆವರು ಸುರಿಸಿ ಕಾಪಾಡಿಕೊಂಡು ಬಂದಿದ್ದ ನೂರಾರು ಅಡಿಕೆ ಸಸಿಗಳನ್ನು ಕಿಡಿಗೇಡಿಗಳು ಕಡಿದು ನೆಲಸಮಮಾಡಿ ವಿಕೃತಿ ಮೆರೆದಿದ್ದಾರೆ. ಎರಡ್ಮೂರು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ್ದ ಅಡಿಕೆ ಗಿಡಗಳು ನೆಲಸಮವಾಗಿರುವುದು ಕಂಡು ರೈತ ಕಣ್ಣೀರಿಟ್ಟಿದ್ದಾನೆ.
ಚಿತ್ರದುರ್ಗ ತಾಲೂಕಿನ ಕಳ್ಳಿಹಟ್ಟಿ ಗ್ರಾಮದ ಕುಬೇರಪ್ಪ ಹಾಗೂ ಬಸವರಾಜಪ್ಪ ಎಂಬುವರಿಗೆ ಸೇರಿದ್ದ ಅಡಿಕೆ ಗಿಡಗಳಿಗೆ ಕೊಡಲಿ ಹಾಕಿದ್ದು, ಸುಮಾರು 70ಕ್ಕೂ ಹೆಚ್ಚು ಗಿಡಗಳನ್ನು ಕಡಿದು ಹಾಕಲಾಗಿದೆ.
ಏನಿದು ಘಟನೆ?
ತಡರಾತ್ರಿ ಕಳ್ಳಿಹಟ್ಟಿ ಗ್ರಾಮದ ಎರಡು ಅಡಿಕೆ ತೋಟಗಳಿಗೆ ನುಗ್ಗಿದ ಖದೀಮರು ಕೊಡಲಿ ಮೂಲಕ ಅಡಿಕೆ ಗಿಡಗಳ ಕಡಿದು ಹಾಕಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ತೋಟಕ್ಕೆ ನುಗ್ಗಿ ಅಡಿಕೆ ಮರ ನಾಶಮಾಡಲು ಯಾವುದೋ ಹಳೆ ವೈಷಮ್ಯ ಇರಬಹುದು ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ. ಕಳ್ಳಿಹಟ್ಟಿ ಗ್ರಾಮದ ರೈತ ಬಸವರಾಜಪ್ಪ ಎಂಬುವರ ಸುಮಾರು 50ಕ್ಕೂ ಅಧಿಕ ಅಡಿಕೆ ಮರಗಳನ್ನು ಕಿಡಿಗೇಡಿಗಳು ಕತ್ತರಿಸಿದ್ದಾರೆ.
ಇದಲ್ಲದೆ ಕುಬೇರಪ್ಪ ಎಂಬುವರ ಜಮೀನಿಗೆ ನುಗ್ಗಿದ ಖದೀಮರು 30ಕ್ಕೂ ಅಧಿಕ ಅಡಿಕೆ ಮರಗಳನ್ನು ನೆಲಸಮಗೊಳಿಸುವುದಲ್ಲದೇ, ಹಲವು ಮರಗಳನ್ನು ಅರ್ಧ ಕೊಡಲಿ ಏಟು ಹಾಕಿ ಪರಾರಿಯಾಗಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇಬ್ಬರು ರೈತರಿಗೆ ಸೇರಿ ಸುಮಾರು 2 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದು ಹಾನಿಗೊಳಗಾದ ರೈತರು ಕಳವಳ ವ್ಯಕ್ತಪಡಿಸಿದ್ದಾರೆ.