ಚಿತ್ರದುರ್ಗ: ಪಿಗ್ಮಿ ಮತ್ತು ನಿಶ್ಚಿತ ಠೇವಣಿಯ ಹೆಸರಿನಲ್ಲಿ ಬೀದಿ ಬದಿ ವ್ಯಾಪಾರಿಗಳು, ಗೃಹಣಿಯರು ಹಾಗೂ ಕಾರ್ಮಿಕರಿಂದ ಹಣ ಸಂಗ್ರಹಿಸಿದ್ದ ಗ್ರೇಟ್ ಫೋರ್ಟ್ ಮೈನಾರಿಟಿಸ್ ಸೌಹಾರ್ದ ಕೋ- ಆಪರೇಟಿವ್ ಲಿಮಿಟೆಡ್ ಬಾಗಿಲು ಮುಚ್ಚಿದ್ದು, ಠೇವಣಿದಾರರು ಆತಂಕಕ್ಕೆ ಒಳಗಾಗಿದ್ದಾರೆ.
ಆ್ಯಬಿಡೆಂಟ್ ಹಾಗೂ ಐ ಮಾನಿಟರಿ ಅಡ್ವೈಸರಿ (ಐಎಂಎ) ಸಾವಿರಾರು ಕೋಟಿ ರೂಪಾಯಿ ಹಣ ಜನರಿಂದ ಸಂಗ್ರಹಿಸಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿರುವ ಬೆನ್ನಲ್ಲೇ, ಚಿತ್ರದುರ್ಗದಲ್ಲೂ ಇಂತಹದೇ ಹಗರಣದ ವಿರುದ್ಧ ನೂರಾರು ಜನ ಬೀದಿಗಿಳಿದಿದ್ದಾರೆ. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ವಂಚನೆ ಎಸಗಿರುವ ಕಂಪನಿಯ ಆಡಳಿತ ಮಂಡಳಿಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಠೇವಣಿ ಹಣ ಮರಳಿ ಕೊಡಿಸುವಂತೆ ಪೊಲೀಸರನ್ನು ಹೂಡಿಕೆದಾರರು ಆಗ್ರಹಿಸಿದ್ದಾರೆ. ಜೊತೆಗೆ ಸ್ಥಳೀಯ ಶಾಸಕರ ಗಮನಕ್ಕೆ ತಂದು, ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಪಿಗ್ಮಿ ವಂಚನೆಗೆ ಒಳಗಾದ ಸಂತ್ರಸ್ತರು ಕಳೆದ 23 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಗ್ರೇಟ್ ಫೋರ್ಟ್ ಮೈನಾರಿಟಿಸ್ ಸೌಹಾರ್ದ ಕೋ- ಆಪರೇಟಿವ್ ಲಿಮಿಟೆಡ್ ಎರಡು ತಿಂಗಳ ಹಿಂದೆ ಏಕಾಏಕಿ ಬಾಗಿಲು ಮುಚ್ಚಿದೆ. ಇನ್ನು ಇಲ್ಲಿ ಠೇವಣಿ ಇರಿಸಿದವರಲ್ಲಿ ಬಹುತೇಕರು ಮುಸ್ಲಿಮರು, ತರಕಾರಿ ವ್ಯಾಪಾರಿಗಳು, ಗೃಹಣಿಯರು, ಬೀದಿ ಬದಿ ವ್ಯಾಪಾರಿ, ದಿನಗೂಲಿ ನೌಕರರು ಹಾಗೂ ಕಾರ್ಮಿಕರು ಆಗಿದ್ದಾರೆ.
ಪಿಗ್ನಿ ರೂಪದಲ್ಲಿ ಹಣವನ್ನು ಸ್ವೀಕರಿಸಿದ ಸೊಸೈಟಿಯ ಮುಖ್ಯಸ್ಥರಾದ ಶಕೀಲ್ ಅಹ್ಮದ್, ಜಬೀ ಎಂಬುವವರು ಸುಮಾರು ₹ 8.5 ಕೋಟಿ ವಂಚಿಸಿ ಕಾಲ್ಕಿತ್ತಿದ್ದಾರೆ. ಕಳೆದ ಏಪ್ರಿಲ್ 25ರಂದು ಬೆಳಕಿಗೆ ಬಂದ ಈ ವಂಚನೆ ಜಾಲಕ್ಕೆ 1000ಕ್ಕೂ ಅಧಿಕ ಜನರು ಹಣ ಹೂಡಿಕೆ ಮಾಡಿದ್ದರು ಎಂದು ತಿಳಿದು ಬಂದಿದೆ.
ಏಪ್ರಿಲ್ 25ರಂದು ಮಾಲೀಕರ ವಂಚನೆ ಬಗ್ಗೆ ''ಈಟಿವಿ ಭಾರತ'' ವರದಿ ಪ್ರಸಾರ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದಿತ್ತು.
ಒಟ್ಟಿನಲ್ಲಿ ಈಗ ಠೇವಣಿ ಇರಿಸಿದವರು ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಹೂಡಿಕೆದಾರರು ಈ ಕುರಿತು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅವರಿಗೆ ನ್ಯಾಯ ಕೊಡಿಸುವಂತೆ ಅಂಗಲಾಚಿದ್ದಾರೆ.