ಚಿತ್ರದುರ್ಗ: ಸರಿಯಾಗಿ ಮಳೆಯಿಲ್ಲದೆ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ವ್ಯವಸಾಯ ಮಾಡದೆ ನಗರಗಳತ್ತ ಹೆಜ್ಜೆ ಹಾಕುವ ಜನರೇ ಹೆಚ್ಚು. ಬರದ ನಾಡು ಎಂಬ ಹಣೆ ಪಟ್ಟಿ ಕಟ್ಟಿಕೊಂಡಿರುವ ಚಿತ್ರದುರ್ಗ ಜಿಲ್ಲೆಯಲ್ಲಂತೂ ಕೃಷಿಯಿಂದ ವಿಮುಖರಾದವರೇ ಹೆಚ್ಚು. ಇದೇ ಜಿಲ್ಲೆಯಲ್ಲಿ ಬಂಗಾರದ ಬೆಳೆ ಬೆಳೆಯುವ ಮೂಲಕ ಸೈ ಅನ್ನಿಸಿಕೊಂಡಿದ್ದಾಳೆ ಬಿಇ ಪದವೀಧರೆ. ಆಕೆಯ ಕೃಷಿಯ ಯಶೋಗಾಥೆ ಎಲ್ಲರ ಗಮನ ಸೆಳೆದಿದೆ.
ಹೌದು, ಹೇಳಿ ಕೇಳಿ ಅದು ಕೋಟೆನಾಡು.. ಕಣ್ಣು ಹಾಯಿಸಿದಷ್ಟು ಕಾಣೋದು ಬರೀ ಕಲ್ಲು ಬಂಡೆಗಳು. ಇಂಥಹ ಹಿಂದುಳಿದ ಪ್ರದೇಶದಲ್ಲೇ ಕೃಷಿಯಲ್ಲಿ ಸಾಧನೆ ಮಾಡಬೇಕೆಂಬ ತುಡಿತದಿಂದ ಚಳ್ಳಕೆರೆ ತಾಲೂಕಿನ ದೋಣೆಹಳ್ಳಿ ಗ್ರಾಮದ ರೋಜಾ ಐಟಿ ಕಂಪನಿಯ ಕೆಲಸ ಬಿಟ್ಟು ಕೃಷಿಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಎಂಜಿನಿಯರಿಂಗ ಮುಗಿಸಿ ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರೋಜಾ, ಲಾಕ್ಡೌನ್ ಅವಧಿಯಲ್ಲಿ ಕೆಲಸಕ್ಕೆ ಗುಡ್ಬೈ ಹೇಳಿ ಊರಿಗೆ ಬಂದ ಈಕೆ ತಂದೆಯೊಂದಿಗೆ ಕೃಷಿ ಕೆಲಸ ಮಾಡೋಕೆ ಶುರು ಮಾಡಿದ್ದಾರೆ. ಮೊದಮೊದಲಿಗೆ ರೋಜಾ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಪೋಷಕರು, ಮಗಳ ಒತ್ತಾಯಕ್ಕೆ ಮಣಿದು ಕೃಷಿ ಕೆಲಸದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಟ್ಟರು. ಪೋಷಕರೊಟ್ಟಿಗೆ ಸೇರಿ ಸಾವಯವ ಕೃಷಿ ಆರಂಭಿಸಿದ ಯುವತಿ, ಆರು ಎಕರೆ ಭೂಮಿಯಲ್ಲಿ 35 ತಳಿಗಳ ತರಕಾರಿಗಳನ್ನು ಬೆಳೆದಿದ್ದಾರೆ.
ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದರೂ ರೋಜಾಗೆ ವ್ಯವಸಾಯದ ಬಗ್ಗೆ ಆಸಕ್ತಿಯಿತ್ತು. ಆದರೂ ಹೆತ್ತವರ ಒತ್ತಾಯದ ಮೇರೆಗೆ ವಿದ್ಯಾಭ್ಯಾಸ ಪೂರೈಸಿ ಕೆಲಸಕ್ಕೆ ಸೇರಿದ್ದರು. ಆದರೆ, ಕೋವಿಡ್ ಅವಧಿಯಲ್ಲಿ ವಿಧಿಸಲಾದ ಲಾಕ್ಡೌನ್ ಪ್ರಯೋಜನ ಪಡೆದುಕೊಂಡ ರೋಜಾ, ಹೊರ ರಾಜ್ಯದ ಕೃಷಿ ಸಾಧಕರ ಸಹಕಾರ ಪಡೆದಿದ್ದಾರೆ. ಮಹಾರಾಷ್ಟ್ರ ಸೇರಿದಂತೆ ಹಲವು ಭಾಗಗಳಿಂದ ಬಿತ್ತನೆ ಬೀಜಗಳನ್ನು ತಂದು ವಿವಿಧ ಬೆಳೆಗಳನ್ನು ಬೆಳೆದು ದಿನಕ್ಕೆ ಅಂದಾಜು 10 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರಂತೆ.