ಚಿತ್ರದುರ್ಗ:ಈಗಾಗಲೇ ಕೊರೊನಾ ರಣಕೇಕೆಯಿಂದ ಹೈರಾಣಾಗಿರುವ ಜಿಲ್ಲೆಯ ಜನರಿಗೆ ಇದೀಗ ಡೆಂಗ್ಯೂ ಹಾಗೂ ಚಿಕನ್ಗುನ್ಯಾ ಆತಂಕ ಶುರುವಾಗಿದೆ.
ಇದರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ, ನಗರ ಮತ್ತು ಸ್ಥಳೀಯ ಸಂಸ್ಥೆಗಳ ಶ್ರಮದ ಜೊತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ಮನವಿ ಮಾಡಿದ್ದಾರೆ.
ಪ್ರಸಕ್ತ ಏಪ್ರಿಲ್ ಅಂತ್ಯಕ್ಕೆ 124 ಡೆಂಗ್ಯೂ, 54 ಚಿಕನ್ಗುನ್ಯಾ ಮತ್ತು 03 ಮಲೇರಿಯಾ ವರದಿಯಾಗಿದೆ. ಅದರಲ್ಲೂ ಚಿತ್ರದುರ್ಗ ತಾಲೂಕು ಒಂದರಲ್ಲೇ 91 ಡೆಂಗ್ಯೂ, 42 ಚಿಕುನ್ಗುನ್ಯಾ ಪ್ರಕರಣ ಪತ್ತೆಯಾಗಿವೆ.
ಕಳೆದ ವರ್ಷದ ಪ್ರಕರಣಗಳಿಗೆ ಹೋಲಿಸಿದಾಗ ಈ ವರ್ಷ ಹೆಚ್ಚಿನ ಹಾವಳಿ ಕಂಡುಬಂದಿದ್ದು, ಇದೀಗ ತಾನೆ ಮಳೆಗಾಲ ಆರಂಭವಾಗಲಿದ್ದು, ಬಳಿಕ ಈ ರೋಗ ಪ್ರಕರಣಗಳು ಇನ್ನಷ್ಟು ಹೆಚ್ಚು ವರದಿಯಾಗುವ ಸಾಧ್ಯತೆಗವೆ. ಈ ರೋಗ ಹರಡದಂತೆ ಸಾರ್ವಜನಿಕರು ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ, ಡೆಂಗಿ ನಿಯಂತ್ರಣ ಕುರಿತ ಕ್ರಮಗಳನ್ನು ಕೈಗೊಳ್ಳಲು ಸಲಹೆ ನೀಡಿದೆ.
ಡೆಂಗ್ಯೂ ಜ್ವರವು ಈಡೀಸ್ ಈಜಿಪ್ಟೈ ಎಂಬ ರೋಗವಾಹಕ ಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತದೆ. ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣ.