ಚಿತ್ರದುರ್ಗ: ಊಟಕ್ಕೆಂದು ಡಾಬಾ ಮುಂದೆ ಬಸ್ ನಿಲ್ಲಿಸಲಾದ ಸಮಯದಲ್ಲಿ ದುಷ್ಕರ್ಮಿಗಳಿಬ್ಬರು ಯುವಕನ ಮೇಲೆ ಆ್ಯಸಿಡ್ ದಾಳಿ ಮಾಡಿ ಪರಾರಿಯಾಗಿರುವ ಘಟನೆ ಹಿರಿಯೂರು ಪಟ್ಟಣದ ಬಳಿ ನಡೆದಿದೆ. ಈ ಘಟನೆ ಪ್ರೀತಿ, ಪ್ರೇಮದ ವಿಷಯಕ್ಕೆ ಸಂಬಂಧಿಸಿದೆ ಎಂದು ಯುವಕ ಆರೋಪಿಸಿದ್ದಾರೆ.
ಘಟನೆಯ ವಿವರ: ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತನನ್ನು ಹೊಳಲ್ಕೆರೆ ನಿವಾಸಿ ಅರುಣ್ ಕುಮಾರ್ (29) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನಲ್ಲಿ ಗೋಗ್ಯಾಸ್ ಎಲ್ಪಿಜಿ ಬಂಕ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಗಳವಾರ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ನಲ್ಲಿ ಚಿತ್ರದುರ್ಗದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಚಾಲಕ ಚಹಾ ಸೇವಿಸಲು ಹಿರಿಯೂರು ಸಮೀಪದ ಖಾಸಗಿ ಡಾಬಾದಲ್ಲಿ ಬಸ್ ನಿಲ್ಲಿಸಿದ್ದಾರೆ. ಬಸ್ನಿಂದ ಕೆಳಗಿಳಿದ ಅರುಣ್ ಕುಮಾರ್ ನೇರವಾಗಿ ವಾಷ್ರೂಂಗೆ ತೆರಳಿ ಮತ್ತೆ ಬಸ್ ಹತ್ತಲು ಬರುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ದುಷ್ಕರ್ಮಿಯೊಬ್ಬ ಆ್ಯಸಿಡ್ ತಂದು ಮೈಮೇಲೆ ಎರಚಿ ಪರಾರಿಯಾಗಿದ್ದಾನೆ. ಅರುಣ್ ಕಿರುಚಿಕೊಂಡಿದ್ದು, ಸ್ಥಳದಲ್ಲಿದ್ದ ಕೆಲವರು ಸಹಾಯಕ್ಕೆ ದೌಡಾಯಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅರುಣ್ ಕುಮಾರ್ ಕೈ ಮತ್ತು ಮುಖಕ್ಕೆ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.