ಚಿತ್ರದುರ್ಗ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಪ್ರಿಯಕರನ ಜೊತೆ ಸೇರಿ ಕೊಲೆಗೈದ ಅಮಾನವೀಯ ಘಟನೆ ತಾಲೂಕಿನ ಹಳವುದರ ಗ್ರಾಮದಲ್ಲಿ ನಡೆದಿತ್ತು. ಈ ಘಟನೆ ನಡೆದ ಮೂರೇ ದಿನಗಳಲ್ಲಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಪ್ರಕರಣದ ಹಿಂದಿನ ಪ್ರೇಮ ಕಹಾನಿಯನ್ನು ಬಯಲಿಗೆಳಿದಿದ್ದಾರೆ.
ಕೊಲೆಯಾದ ಮುರುಗೇಶನ ಪತ್ನಿ ನಾಗಮ್ಮ ತಾಲೂಕಿನ ಹಳವುದರ ಗ್ರಾಮದ ಮುರುಗೇಶ್ (38) ಕೊಲೆಯಾದ ವ್ಯಕ್ತಿ. ಪತ್ನಿ ನಾಗಮ್ಮ (32) ಹಾಗೂ ಪ್ರಿಯಕರ ಅರಭಗಟ್ಟ ಗ್ರಾಮದ ಬಸವರಾಜ ಬಂಧಿತರು.
ಪ್ರಕರಣದ ಸಂಪೂರ್ಣ ವಿವರ:
ತಾಲೂಕಿನ ನೀರತಡಿ ಗ್ರಾಮದ ನಾಗಮ್ಮ ಹಾಗೂ ಮುರುಗೇಶ ಕಳೆದ 11 ವರ್ಷಗಳ ಹಿಂದೆ ಮದುವೆ ಆಗಿದ್ದರು. ದಂಪತಿಗೆ 10 ವರ್ಷದ ಮಗನಿದ್ದು, ಪತಿ- ಪತ್ನಿಯ ಬದುಕು ಅನ್ಯೋನ್ಯವಾಗಿಯೇ ಸಾಗುತ್ತಿತ್ತು. ಆದ್ರೆ ನಾಲ್ಕು ತಿಂಗಳ ಹಿಂದೆ ಬಸವರಾಜ ಎಂಬ ವ್ಯಕ್ತಿ ಇವರ ಕುಟುಂಬಕ್ಕೆ ಹತ್ತಿರವಾಗಿದ್ದಾನೆ. ಜೊತೆಗೆ ನಾಗಮ್ಮನ ಜೊತೆ ಗೆಳೆತನ ಬೆಳೆಸಿದ ಈತ ಸರಸ ಸಲ್ಲಾಪವನ್ನೂ ಶುರು ಮಾಡಿದ್ದಾನೆ. ಕೊನೆಗೊಂದಿನ ಸ್ನೇಹಿತ ಹಾಗು ಪತ್ನಿಯ ಕಾರುಬಾರು ಅದು ಹೇಗೋ ಗಂಡನ ಕಿವಿಗೆ ಬಿದ್ದಿದೆ.
ಪ್ರಕರಣದ ಬಗ್ಗೆ ಚಿತ್ರದುರ್ಗ ಎಸ್ಪಿ ಮಾಹಿತಿ ಯಾವಾಗ ಈ ವಿಷಯ ಗಂಡನಿಗೆ ತಿಳಿಯಿತೋ ಅಲ್ಲಿಂದ ಗಂಡ-ಹೆಂಡತಿ ನಡುವೆ ಜಗಳ ಶುರುವಾಗಿದೆ. ಈ ವಿಚಾರವಾಗಿ ಇಬ್ಬರ ನಡುವೆ ಕಲಹಗಳು ಸಾಮಾನ್ಯವಾಗ ತೊಡಗಿದವು. ಇದರಿಂದ ಕುಪಿತಳಾದ ನಾಗಮ್ಮ ಗಂಡನನ್ನು ಪ್ರಿಯಕರನ ಜೊತೆ ಸೇರಿ ಮುಗಿಸೇ ಬಿಡುವ ನಿರ್ಧಾರ ಮಾಡಿದ್ದಾಳೆ. ಈ ನಿಟ್ಟಿನಲ್ಲಿ ಮೇ 27 ರಂದು ಮೊದಲ ಪ್ರಯತ್ನ ಮಾಡ್ತಾಳೆ. ಈ ಪ್ರಯತ್ನ ಅಂದು ಸಫಲವಾಗಿರಲಿಲ್ಲ.
ಗಂಡನನ್ನು ಕೊಲೆ ಮಾಡಲೇಬೇಕು ಎಂದೇ ಪಣ ತೊಟ್ಟಿದ್ದ ನಾಗಮ್ಮ ಜೂನ್ 18 ರಾತ್ರಿ ಹೊಟ್ಟೆನೋವಿನ ನೆಪ ಹೇಳಿ ಗಂಡನನ್ನು ಭರಮಸಾಗರ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದಾಳೆ. ಮೊದಲೇ ಪ್ರಿಯಕರನ ಜೊತೆ ಪ್ಲ್ಯಾನ್ ಮಾಡಿಕೊಂಡಿದ್ದ ಐನಾತಿ ಮಹಿಳೆ ಹೆಗ್ಗೆರೆ ಗ್ರಾಮದ ಮಟ್ಟಿಯ ಬಳಿ ಬೈಕ್ ನಿಲ್ಲಿಸುವಂತೆ ಸೂಚಿಸಿದ್ದಾಳೆ. ಕುತಂತ್ರದ ಬಗ್ಗೆ ಅರಿಯದ ಗಂಡ ಬೈಕ್ ನಿಲ್ಲಿಸಿದಾಗ ಪ್ರಿಯಕರ ಮತ್ತು ನಾಗಮ್ಮ ಸೇರಿ ಅಲ್ಲಿಯೇ ಇದ್ದ ಕೃಷಿ ಹೊಂಡಕ್ಕೆ ತಳ್ಳಿ ದಾರುಣವಾಗಿ ಕೊಲೆ ಮಾಡಿದ್ದರು.
ಮುರುಗೇಶ ಮತ್ತು ಬಸವರಾಜನ ಸ್ನೇಹ
ಇನ್ನು ಮುರುಗೇಶ ಹಾಗೂ ಬಸವರಾಜ ಪರಿಚಿತರು. ಇಬ್ಬರ ಜಮೀನುಗಳು ಸಮೀಪದಲ್ಲೇ ಇವೆ. ಟ್ರ್ಯಾಕ್ಟರ್ ಹೊಂದಿರುವ ಬಸವರಾಜ ಈಚೆಗೆ ಮುರುಗೇಶನ ಜಮೀನು ಉಳುಮೆ ಮಾಡಿ ಕೊಟ್ಟಿದ್ದನಂತೆ. ಇದರ ಹಣ ಪಾವತಿ ಬಾಕಿಯಿತ್ತು. ಆಗಾಗ ಈತ ಮುರುಗೇಶನಿಗೆ ಸಾಲ ಕೂಡಾ ಕೊಡುತ್ತಿದ್ದನಂತೆ. ಮುರುಗೇಶ ಸಾಲ ಮರಳಿ ಪಡೆಯುವ ನೆಪದಲ್ಲಿ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಈ ವೇಳೆ ನಾಗಮ್ಮ ಹಾಗೂ ಬಸವರಾಜ ನಡುವೆ ಅಕ್ರಮ ಸಂಬಂಧ ಬೆಳೆದಿದೆ.
ಆಗಿಂದಾಗ್ಗೆ ಇಬ್ಬರು ಜೊತೆ ಸೇರಿ ಮದ್ಯ ಸೇವಿಸಿ ಹರಟೆ ಹೊಡೆಯುತ್ತಿದ್ದರು. ಪತ್ನಿ ಹಾಗೂ ಸ್ನೇಹಿತನ ನಡುವಿನ ಅಕ್ರಮ ಸಂಬಂಧದ ಮಾಹಿತಿ ಮುರುಗೇಶನಿಗೆ ತಿಳಿಯುತ್ತದೆ.
ಪ್ರಕರಣದ ಸುಳಿವು ನೀಡಿದ ಪತ್ರ
ಕೊಲೆಯಾದ ವ್ಯಕ್ತಿಯ ಬಳಿ ಪತ್ತೆಯಾದ ಪತ್ರ ಪೊಲೀಸರಿಗೆ ಕೊಲೆಯ ಸುಳಿವು ನೀಡಿತ್ತು. ಈ ಪತ್ರದಲ್ಲಿ ನಾಗಮ್ಮ ಮತ್ತು ಬಸವರಾಜನಿಗೆ ಅಕ್ರಮ ಸಂಬಂಧ ಇರುವುದು ಗೊತ್ತಾಗಿದೆ. ಮುರುಗೇಶನ ತಂದೆ ಭರಮಸಾಗರ ಠಾಣೆಗೆ ನೀಡಿದ ದೂರಿನ ಆಧಾರದ ಮೇರೆಗೆ ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದರು. ಪತಿಯ ಕೊಲೆಗೆ ಕುಮ್ಮಕ್ಕು ನೀಡಿದ್ದು ಹಾಗೂ ಸಂಚು ರೂಪಿಸಿದ ಆರೋಪದ ಮೇರೆಗೆ ಪತ್ನಿ ಜೈಲು ಸೇರಿದ್ದಾಳೆ.