ಚಿತ್ರದುರ್ಗ: ಮನೆ ಬೀಗ ಒಡೆದು ಸರಣಿ ಕಳ್ಳತನ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಜಿ ರಾಧಿಕಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಐನಹಳ್ಳಿ ಭಾಗ್ಯಮ್ಮ ಎಂಬುವರ ಮನೆ ಕಳ್ಳತನ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಗರದ ಸನಾವುಲ್ಲಾ ಖಾದರ್ ಸಾಬ್ (50) ಹಾಗೂ ಸುಭಾನ್ ಸಾಬ್ ಎಂಬ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ, 5.62 ಲಕ್ಷ ಮೌಲ್ಯದ 124 ಗ್ರಾಂ ಬಂಗಾರದ ಆಭರಣಗಳು, ಕೃತ್ಯಕ್ಕೆ ಬಳಸಿದ ಬೈಕ್ ಹಾಗೂ ಕಬ್ಬಿಣದ ರಾಡ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.
ಭಾಗ್ಯಮ್ಮ ಎಂಬುವರ ಮನೆಯಲ್ಲಿ 3 ಲಕ್ಷ ಬೆಲೆಬಾಳುವ ಬಂಗಾರ ಹಾಗೂ 70 ಸಾವಿರ ನಗದು ಹಣ ಕಳವು ಮಾಡಿಕೊಂಡು ಖದೀಮರು ಪರಾರಿಯಾಗಿದ್ದರು. ಈ ಬಗ್ಗೆಯೂ ದೂರು ದಾಖಲಿಸಿಕೊಂಡು ಡಿ.16ರಂದು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಈ ಗ್ಯಾಂಗ್ನಲ್ಲಿ ಪಾಲಯ್ಯ, ದಾದೂ ಸೇರಿದಂತೆ ಇತರ ಖದೀಮರು ಭಾಗಿಯಾಗಿದ್ದಾರೆ ಎಂದು ಬಂಧಿತ ಆರೋಪಿಗಳ ಬಾಯ್ಬಿಟ್ಟಿದ್ದಾರೆ. ಇನ್ನು ಸನಾವುಲ್ಲಾಗೆ ಹೆಂಡತಿ ಹಸೀನಾ ಬಿ ಕೂಡ ಕಳ್ಳತನಕ್ಕೆ ಸಾಥ್ ನೀಡಿರುವುದು ವಿಚಾರಣೆಯಲ್ಲಿ ತಿಳಿದು ಬಂದಿದ್ದು ತುರುವನೂರು ಹಾಗೂ ಭರಮಸಾಗರ ಠಾಣೆಗಳಲ್ಲಿ ಆರೋಪಿಗಳ ಮೇಲೆ ಕಳವು ಪ್ರಕರಣಗಳು ದಾಖಲಾಗಿವೆ ಎಂದರು.
ಇತ್ತ ಆರೋಪಿ ಸನಾವುಲ್ಲಾ ಮತ್ತು ಆತನ ತಂಡ ಜಿಲ್ಲೆಯಲ್ಲಿ ದೇವಸ್ಥಾನ, ಮನೆ ಸೇರಿದಂತೆ ನಾಲ್ಕು ಕಡೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಹಾವೇರಿ, ಬಳ್ಳಾರಿ ಜಿಲ್ಲೆಗಳಲ್ಲಿಯೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದ್ದು, ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆದಿದೆ ಎಂದು ಎಸ್ಪಿ ರಾಧಿಕಾ ತಿಳಿಸಿದರು.