ಚಿತ್ರದುರ್ಗ: ಆಷಾಢ ಮಾಸದಲ್ಲಿ ಮದುವೆ ಮಾಡಿದ್ರೆ ಕೆಟ್ಟದಾಗುತ್ತದೆ ಎಂಬ ಮೂಢ ನಂಬಿಕೆಗೆ ಜೋತು ಬಿದ್ದು, ವಿವಾಹ ಮಾಡಲು ಹಿರಿಯರು ಹಿಂಜರಿಯುತ್ತಿದ್ದರು. ಅದ್ರೆ ಮುರುಘಾ ಮಠದ ಶ್ರೀ ಮೂಢ ನಂಬಿಕೆಗಳಿಗೆ ಸೆಡ್ಡು ಹೊಡೆಯುವ ಮೂಲಕ ಆಷಾಢ ಮಾಸದಲ್ಲಿ 32 ನವ ಜೋಡಿಗಳಿಗೆ ಮದುವೆಯನ್ನು ಮಾಡಿಸಿದ್ದಾರೆ.
ಬಸವ ತತ್ವಗಳಿಗೆ ಮನಸೋತು ಅಂತರ್ ಧರ್ಮೀಯ ಮದುವೆಯಾದ ಮಹಿಳೆ ವಿಶೇಷವೆಂದರೆ ವಿವಾಹ ಮಹೋತ್ಸವದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಬಸವ ತತ್ವಗಳಿಗೆ ಮಾರು ಹೋಗಿ ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ ಮದುವೆಯಾಗಿ ಮೂಢನಂಬಿಕೆಗೆ ಇತಿಶ್ರೀ ಹಾಡಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಅಲದಗೇರಿ ಗ್ರಾಮದವರಾದ ಹಸೀನಾ ಹಡೀಯಾಳ್ ಹುಟ್ಟಿದ್ದು ಬೆಳೆದಿದ್ದು, ಮಠ ಮಾನ್ಯಗಳಲ್ಲಿ. ಅದ್ದರಿಂದ ಬಸವತತ್ವಗಳಲ್ಲಿ ಪಳಗಿದ ಹಸೀನಾರವರು ಇದೀಗ ಹಿಂದೂ ಧರ್ಮದ ಸಂಪ್ರದಾಯದಂತೆ ಮುರುಘಾ ಮಠದಲ್ಲಿ ಮದುವೆಯಾಗಿ ನೆರೆದಿದ್ದ ಜನರ ಹುಬ್ಬೇರಿಸುವಂತೆ ಮಾಡಿದ್ದಾರೆ.
ನವ ವಿವಾಹಿತೆ ಹಸೀನಾರವರು ಪ್ರಸ್ತುತವಾಗಿ 'ಸಾಮಾಜಿಕ ಪರಿವರ್ತನಾ ಜನಾಂದೋಲನ ಮಕ್ಕಳ ಹಕ್ಕುಗಳು' ಎಂಬ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಸವಣ್ಣನವರ ವಚನಗಳನ್ನು ಕಲಿತಿರುವ ಇವರು ಬುದ್ಧ, ಬಸವ, ಅಂಬೇಡ್ಕರ್ರವರು ವಿರೋಧಿಸಿದ ಜಾತಿ ಪದ್ದತಿಯನ್ನು ತೊಳೆದು ಹಾಕುವ ಸಲುವಾಗಿ ಮದುವೆಯಾಗಿ ಇತರರಿಗೆ ಮಾದರಿಯಾಗಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಎರಡು ಕೋಮುಗಳ ನಡುವೆ ನಡೆಯುತ್ತಿರುವ ಕೋಮುಭಾವನೆಗಳನ್ನು ತೊಳೆದು ಹಾಕುವ ಸಲುವಾಗಿ ಹಸೀನಾರವರು ಈ ಅಂತರ್ ಧರ್ಮಿಯ ವಿವಾಹ ಮಾಡಿಕೊಳ್ಳುವ ಮೂಲಕ ಕೋಮು ದಳ್ಳುರಿಯಲ್ಲಿ ಬೇಯುತ್ತಿರುವ ಜನರಿಗೆ ಶಾಂತಿಯ ಸಂದೇಶ ರವಾನಿಸಿದ್ದಾರೆ.
ಇನ್ನು ಈ ನವ ಜೋಡಿಗೆ ಶ್ರೀ ಶಿವಮೂರ್ತಿ ಮುರುಘಾ ಶರಣರು ಆಶೀರ್ವಚನ ನೀಡಿ ಶುಭ ಕೋರಿದರು. ಈ ಹಿಂದೆ ಅಮಾವಾಸ್ಯೆ ದಿನದಂದು ನೆರವೇರಿಸುತ್ತಿದ್ದ ವಿವಾಹ ಮಹೋತ್ಸವವನ್ನು ಆಷಾಢ ಮಾಸದಲ್ಲಿ ಮಾಡಿ ಸುಮಾರು 32 ನವ ಜೋಡಿಗಳಿಗೆ ಮದುವೆ ಮಾಡಿಸಿ ಇದೀಗ ಮತ್ತೊಂದು ಮೂಢನಂಬಿಕೆಗೆ ಕೊನೆಗಾಣಿಸಿದ್ದಾರೆ. ಇಷ್ಟು ದಿನಗಳ ಕಾಲ ಮುರುಘಾ ಮಠದ ಡಾ. ಶ್ರೀ. ಶಿವಮೂರ್ತಿ ಮುರುಘಾ ಶರಣರು ಕಳೆದ ಮೂರು ದಶಕಗಳಿಂದ ಜನರಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಿ ಅಮವಾಸ್ಯೆ ಹಾಗೂ ಆಷಾಢ ಮಾಸ ಕೂಡ ಶುಭ ಎಂದು ಮನವರಿಕೆ ಮಾಡಿಕೊಡುತ್ತಿದ್ದಾರೆ. ಇದೇ ಕಾರಣಕ್ಕೆ ಪ್ರತಿ ತಿಂಗಳ 5 ನೇ ತಾರೀಖು ಅಮವಾಸ್ಯೆ, ಗ್ರಹಣ, ಮಂಗಳವಾರ ಏನೇ ಇದ್ದರೂ ಮುರುಘಾ ಮಠದ ಅನುಭವ ಮಂಟಪದಲ್ಲಿ ಹತ್ತಾರು ಜೋಡಿಗಳು ಹಸೆಮಣೆ ಏರುತ್ತಾರೆ.
ಒಟ್ಟಿನಲ್ಲಿ ಅಣ್ಣ ಬಸವಣ್ಣನವರ ವಚನಗಳ ಮೇಲೆ ನಡೆಯುತ್ತಿರುವ ಈ ಮುರುಘಾ ಮಠ ಕಾಲ ಬದಲಾದಂತೆ ಜನ ಕೂಡಾ ಬದಲಾಗಬೇಕು ಎಂದು ಪ್ರತಿ ಅಮಾವಾಸ್ಯೆಯ ಬದಲು ಆಷಾಢ ಮಾಸದಲ್ಲಿ ನವ ಜೋಡಿಗಳಿಗೆ ಲಗ್ನ ಮಾಡಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಪರಂಪರೆ ಹೊಂದಿರುವ ಮುರುಘಾ ಮಠ ಕೂಡ ಜನರಲ್ಲಿರುವ ಅಜ್ಞಾನ ತೊಡೆದು ವೈಚಾರಿಕ ಹಾದಿಯಲ್ಲಿ ಕರೆದೊಯ್ಯುತ್ತಿದೆ ಅನ್ನೋದಕ್ಕೆ ಆಷಾಢ ಮಾಸದಲ್ಲೂ ಮದುವೆ ನಡೆದಿದ್ದು ಒಂದು ಸಾಕ್ಷಿಯಷ್ಟೇ.