ಚಿತ್ರದುರ್ಗ:ಪ್ರೀತಿಸಿದವಳನ್ನ ಕೊಂದ ಬಾಲಕನೋರ್ವ 20 ದಿನಗಳ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿತ್ರದುರ್ಗ ತಾಲೂಕಿನ ಜಾನಕೊಂಡ ಸಮೀಪದ ಗಂಜಿಗಟ್ಟೆ ಗ್ರಾಮದಲ್ಲಿ ನಡೆದಿದೆ.
ಪ್ರೀತಿಸಿದವಳನ್ನ ಕೊಂದು ಬಂಡೆ ಕೆಳಗೆ ಬಚ್ಚಿಟ್ಟ: 20 ದಿನಗಳ ನಂತರ ಆತ್ಮಹತ್ಯೆಗೆ ಯತ್ನಿಸಿದ ಬಾಲಕ - ಚಿತ್ರದುರ್ಗ ತಾಲೂಕಿನ ಜಾನಕೊಂಡ
ಪ್ರೀತಿಸಿದವಳನ್ನ ಕೊಂದ ಬಾಲಕನೋರ್ವ 20 ದಿನಗಳ ಬಳಿಕ, ಪ್ರೇಮಿಗಳ ದಿನದಂದು ಆಕೆಯನ್ನ ನೆನೆದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಪ್ರಿಯತಮೆ ಕೂಡ ಅಪ್ರಾಪ್ತೆಯಾಗಿದ್ದು, ಪೋಷಕರು ಮದುವೆಗೆ ಒಪ್ಪದ್ದಕ್ಕೆ ಜ. 27 ರಂದು ಜಾನುಕೊಂಡ ಸಮೀಪದ ಗಂಜಿಗಟ್ಟೆ ರಂಗನಾಥ ಸ್ವಾಮಿ ಬೆಟ್ಟಕ್ಕೆ ಆಕೆಯನ್ನ ಕರೆದೊಯ್ದು ಕೊಲೆ ಮಾಡಿದ್ದಾನೆ. ಬಳಿಕ ಬಂಡೆಯ ಕೆಳಗೆ ಮೃತ ದೇಹ ಬಚ್ಚಿಟ್ಟು ಗ್ರಾಮಕ್ಕೆ ಹಿಂತಿರುಗಿದ್ದಾನೆ. ಮಗಳು ಕಾಣೆಯಾಗಿದ್ದರಿಂದ ಆತಂಕಗೊಂಡ ಬಾಲಕಿಯ ಪೋಷಕರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ 20 ದಿನಗಳ ಬಳಿಕ ಘಟನೆ ಬೆಳಕಿಗೆ ಬಂದಿದ್ದು, ಬಾಲಕಿಯ ದೇಹ ಬಂಡೆಯ ಕೆಳಗಡೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪ್ರೇಮಿಗಳ ದಿನದಂದು ಪ್ರಿಯತಮೆಯನ್ನು ನೆನದು ಆರೋಪಿ, ಪೋಷಕರ ಬಳಿ ಕೊಲೆ ವಿಷಯ ಹೇಳಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದೀಗ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನಾ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಹಾಗೂ ಮಹಿಳಾ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಕೊಲೆಗೂ ಮುನ್ನ ಅತ್ಯಾಚಾರ ಎಸಗಿರುವ ಶಂಕೆ ಕೂಡ ವ್ಯಕ್ತವಾಗಿದೆ.