ಚಿತ್ರದುರ್ಗ: ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಷ್ಮಿ ಪೂಜೆಗೆ ಇಡಲು ಬ್ಯಾಂಕ್ನಿಂದ 7 ಲಕ್ಷ ರೂ. ನಗದನ್ನು ಬಿಡಿಸಿ ಮನೆಗೆ ಕೊಂಡೊಯ್ಯುವ ವೇಳೆ ಖತರ್ನಾಕ್ ಕಳ್ಳ ಹಣವನ್ನು ಎಗರಿಸಿದ್ದಾನೆ. ಕಳ್ಳನ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿ ಪತ್ತೆಯಾಗಿಲ್ಲ.
ತಾಲೂಕಿನ ಭೀಮಸಮುದ್ರ ಗ್ರಾಮದ ಓಂಕಾರಪ್ಪ ಎಂಬುವರಿಗೆ ಸೇರಿದ ಹಣ ಇದಾಗಿದ್ದು, ನಿನ್ನೆ ಬ್ಯಾಂಕ್ನಿಂದ ಹಣ ಡ್ರಾ ಮಾಡಿದ್ದರು. ಬೈಕ್ ಹಿಂಭಾಗದ ಬ್ಯಾಗ್ನಲ್ಲಿ ಹಣವನ್ನಿಟ್ಟುಕೊಂಡು ತೆರಳುವಾಗ ಈ ಘಟನೆ ನಡೆದಿದೆ.
ಹಣ ತೆಗೆದುಕೊಂಡು ಮನೆಗೆ ತೆರಳುವ ಮಾರ್ಗಮಧ್ಯದಲ್ಲಿ ಬೈಕ್ ನಿಲ್ಲಿಸಿದ ಓಂಕಾರಪ್ಪ ಚಾಕೋಲೆಟ್ ತರಲು ಅಂಗಡಿಗೆ ತೆರಳಿದ್ದಾರೆ. ಅವರನ್ನೇ ಹಿಂಬಾಲಿಸಿಕೊಂಡು ಬಂದ ಚಾಲಕಿ ಕಳ್ಳ ಹೊಂಚು ಹಾಕಿ ಹಣವನ್ನು ಎಗರಿಸಿ ಪರಾರಿಯಾಗಿದ್ದಾನೆ.
ಸದ್ಯ ಹಣ ಕಳೆದುಕೊಂಡ ಓಂಕಾರಪ್ಪ ಹತ್ತಿರದ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೃತ್ಯ ಎಸಗಿರುವ ಕಳ್ಳರು ಹೊರ ರಾಜ್ಯದವರಿರಬೇಕೆಂದು ಪೊಲೀಸರು ಶಂಕಿಸಿದ್ದು, ಹಣ ಕಳೆದುಕೊಂಡ ಓಂಕಾರಪ್ಪನಿಗೆ ದಿಕ್ಕು ತೋಚದಂತಾಗಿದೆ.