ಚಿತ್ರದುರ್ಗ: ದೆವ್ವ ಬಿಡಿಸುವ ನೆಪದಲ್ಲಿ 3 ವರ್ಷದ ಹೆಣ್ಣು ಮಗುವಿಗೆ ಮಂತ್ರವಾದಿ ಬೆತ್ತದಿಂದ ಹೊಡೆದ ಕಾರಣ, ಪುಟ್ಟ ಮಗು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಜ್ಜಿ ಕ್ಯಾತನಹಳ್ಳಿ ಗ್ರಾಮದ ಪ್ರವೀಣ್ ಹಾಗೂ ಶಾಮಲಾ ದಂಪತಿಗಳ ಪುತ್ರಿ ಪೂರ್ಣಿಕಾ (3) ಪದೇ ಪದೇ ಬೆಚ್ಚಿ ಬೀಳುತ್ತಿದ್ದಳು. ಇದನ್ನು ಕಂಡ ಪೋಷಕರು ತಮ್ಮ ಪುತ್ರಿ ಮಾಟ-ಮಂತ್ರದ ಕಾಟದಿಂದ ಹೀಗೆ ಮಾಡುತ್ತಾ ಇರಬಹುದು ಎಂಬುದಾಗಿ ನಂಬಿ, ಅಜ್ಜಿ ಕ್ಯಾತನಹಳ್ಳಿಯ ಯಲ್ಲಮ್ಮನ ಪೂಜಾರಿ ರಾಕೇಶ್ ಎಂಬಾತನ ಬಳಿಗೆ ಕರೆದುಕೊಂಡು ಹೋಗಿ ತೋರಿಸಿದ್ದಾರೆ.
ದೆವ್ವ ಬಿಡಿಸುವುದಾಗಿ ಮೂರು ವರ್ಷದ ಮಗುವನ್ನು ಕೊಂದ ಮಂತ್ರವಾದಿ ಆಗ ಮಂತ್ರವಾದಿ ಮಗು ಪದೇ ಪದೆ ಬೆಚ್ಚಿ ಬೀಳೋದಕ್ಕೆ ಕಾರಣ ಅವಳಿಗೆ ದೆವ್ವ ಹಿಡಿದಿದೆ, ಅದನ್ನು ಬಿಡಿಸಬೇಕು ಎಂದು ಹೇಳಿ ಎಕ್ಕೆಗಿಡ ಬೆತ್ತದಿಂದ ಮಗುವಿಗೆ ಬಾರಿಸಿದ ಬೆನ್ನಲ್ಲೇ ಮಗುವಿನ ದೇಹದ ತುಂಬಾ ಬೆತ್ತದ ಗಾಯ, ಬಾಸುಂಡೆ ಕಲೆ ಕಂಡು ಬಂದಿದೆ ಮಂತ್ರವಾದಿಯ ಹೊಡೆತಕ್ಕೆ ಸ್ಥಳದಲ್ಲೇ ಮಗು ಮೂರ್ಛೆ ಹೋಗಿದ್ದರಿಂದ ಹೊಳಲ್ಕೆರೆ ಆಸ್ಪತ್ರೆಗೆ ಕರೆ ತರುವಷ್ಟರಲ್ಲಿ ಬಾಲಕಿ ಕೊನೆಯುಸಿರೆಳೆದಿದ್ದಾಳೆ.
ಇನ್ನು ಮಾಹಿತಿ ತಿಳಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ ರಾಧಿಕಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಮಾಹಿತಿ ಕಲೆ ಹಾಕಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮಂತ್ರವಾದಿ ರಾಕೇಶ (19) ಹಾಗು ಈ ಕೃತ್ಯದಲ್ಲಿ ಭಾಗಿಯಾಗಿದ್ದ ರಾಕೇಶ್ನ ಅಣ್ಣ ಪರಶುರಾಮ್ ರನ್ನು ಚಿಕ್ಕಜಾಜೂರು ಠಾಣೆಯ ಪೊಲೀಸರು ಬಂಧಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಒಟ್ಟಾರೆ ಮೌಢ್ಯಚಾರಣೆಗೆ ಪುಟ್ಟ ಕಂದಮ್ಮ ಬಲಿಯಾಗಿದ್ದು, ಪೋಷಕರಿಗೆ ದಿಕ್ಕು ತೋಚದಂತಾಗಿದೆ. ಬೆಚ್ಚಿ ಬೀಳುತ್ತಿದ್ದಾಳೆಂದು ಎಂಬ ಒಂದೇ ನೆಪ ಮಾಡಿಕೊಂಡ ಮಂತ್ರವಾದಿ ಪುಟ್ಟ ಕಂದಮ್ಮಳ ಜೀವ ಬಲಿಪಡೆದಿದ್ದು, ಇದೀಗ ಕಂಬಿ ಎಣಿಸುವಂತಾಗಿದೆ.