ಚಿಕ್ಕಮಗಳೂರು:ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಸ್ಥಾನ ಸಖತ್ ಸ್ಟ್ರಾಂಗ್ ಅನಿಸುತ್ತದೆ. ಏಕೆಂದರೆ ಅಧಿಕಾರದಲ್ಲಿ ಕುಳಿತ ಮೇಲೆ ನಾನು ರಾಜೀನಾಮೆ ಕೊಡಲ್ಲ ಅನ್ನೋದು ಎಲ್ಲರ ಡೈಲಾಗ್ ಆಗಿದೆ. ಅಧ್ಯಕ್ಷರಾಗಬೇಕಾದ್ರೆ ನಾನು ಪಕ್ಷದ ಶಿಸ್ತಿನ ಸಿಪಾಯಿ ಅನ್ನುವವರು, ಅಧ್ಯಕ್ಷರಾಗಿ ಅಧಿಕಾರ ನೋಡಿದ ಮೇಲೆ ಏನೋ ಅವರ ವರಸೆಯೇ ಫುಲ್ ಡಿಫರೆಂಟ್. ಅಂದು ಚೈತ್ರ ಮಾಲತೇಶ್ ಮಾಡಿದ್ದು ಇದೇ ರೀತಿ. ಇಂದು ಸುಜಾತ ಕೃಷ್ಣಪ್ಪ ಮಾಡುತ್ತಿರೋದು ಅದೇ.
2016ರ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಚುನಾವಣೆ ಬಳಿಕ ಅಧ್ಯಕ್ಷರ ಸ್ಥಾನ ಕಾಫಿನಾಡಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. 24ನೇ ವಯಸ್ಸಿಗೆ ಚೈತ್ರ ಮಾಲತೇಶ್‍ಗೆ ಅಧ್ಯಕ್ಷರಾಗಿದ್ದರು. ಮೊದಲು ಅಧ್ಯಕ್ಷರಾಗುವವರು 20 ತಿಂಗಳು, ನಂತರ ಆಗುವವರು 40 ತಿಂಗಳು ಎಂದು ಒಪ್ಪಂದ ಮಾಡಿಕೊಂಡಿದ್ದರು. ಆದರೇ ಅಧ್ಯಕ್ಷರಾಗುವಾಗ ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಹೇಳಿದ ಕೂಡಲೇ ರಿಸೈನ್ ಮಾಡ್ತೀನಿ ಅಂತಿದ್ದ ಚೈತ್ರ, 20 ತಿಂಗಳ ಅಧಿಕಾರದ ಬಳಿಕ ರಾಜೀನಾಮೆ ಕೊಡೋದಕ್ಕೆ ಸಿಕ್ಕಾಪಟ್ಟೆ ಸತಾಯಿಸಿದ್ದರು. ಕೊನೆಗೆ ಪಕ್ಷದಿಂದ ಉಚ್ಛಾಟನೆ ಮಾಡಿ ಕೆಳಗಿಳಿಸಬೇಕಾಯಿತು. ಬಳಿಕ ಅಧ್ಯಕ್ಷರಾದ ಸುಜಾತ ಕೃಷ್ಣಪ್ಪ ಕೂಡ ಈಗ ರಾಜೀನಾಮೆ ಕೊಡೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ನಾನಿನ್ನು 28 ತಿಂಗಳು ಅಧಿಕಾರ ಮಾಡಿದ್ದೇನೆ. 40 ತಿಂಗಳು ಅಧಿಕಾರ ನಡೆಸಿಲ್ಲ. ಪಕ್ಷದ ಮೇಲೆ ಗೌರವವಿದೆ. ಆದರೇ ಪಕ್ಷದ ಒಳಗಿನವರ ನಡೆ-ನುಡಿ ಬಗ್ಗೆ ಬೇಸರವಾಗಿದೆ ಎಂದೂ ಹೇಳುತ್ತಿದ್ದಾರೆ.