ಚಿಕ್ಕಮಗಳೂರು:ರಾಜ್ಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಅನೇಕ ಹೈ ವೋಲ್ಟೇಜ್ ವಿಧಾನಸಭಾ ಕ್ಷೇತ್ರಗಳಿದ್ದವು. ಈ ಪೈಕಿ ಕಡೂರು ಕ್ಷೇತ್ರ ಕೂಡ ಒಂದು. ಮಾಜಿ ಶಾಸಕ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮಾನಸ ಪುತ್ರ ಎಂದೇ ಕರೆಯುವ ವೈ.ಎಸ್.ವಿ ದತ್ತ ಅವರು ಜೆಡಿಎಸ್ ಬಿಟ್ಟು, ಕಾಂಗ್ರೆಸ್ ಸೇರಿ ಮತ್ತೆ ಜೆಡಿಎಸ್‌ನಿಂದಲೇ ಸ್ಪರ್ಧಿಸಿ ಸೋಲು ಅನುಭವಿಸಿದರು. ಮಂಗಳವಾರ ತಮ್ಮ ಹುಟ್ಟೂರು ಯಗಟಿಯ ಸ್ವಗೃಹದಲ್ಲಿ ಕಾರ್ಯಕರ್ತರ ಸಮ್ಮುಖದಲ್ಲಿ ಸೋಲು ಹಾಗೂ ಮಾಡಿದ ತಪ್ಪಿಗೆ ಪ್ರಾಯಶ್ಚಿತ ಪಾದಯಾತ್ರೆ ಮಾಡುವುದಾಗಿ ಅವರು ಪ್ರಕಟಿಸಿದರು. ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದರು.
ದತ್ತ ಮಾತನಾಡಿ, "ನನಗೆ ಕ್ಷೇತ್ರದ ಜನತೆ ನೀಡಿರುವ ಪ್ರೀತಿಗೆ ಪ್ರತಿಯಾಗಿ ನನ್ನ ಕೊನೆಯುಸಿರು ಇರುವವರೆಗೂ ಎಲ್ಲರಲ್ಲೂ ಒಂದಾಗಿ, ನನ್ನ ಈ ನೆಲದಲ್ಲಿ ಮಣ್ಣಾಗುತ್ತೇನೆ. ನನ್ನ ಹಲವು ತಪ್ಪುಗಳಿಗೆ ಜನರು ಸರಿಯಾದ ಶಿಕ್ಷೆ ನೀಡಿದ್ದಾರೆ. ತಪ್ಪು ಮಾಡಿದ ನಾನು ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇನೆ. ಜೂನ್ 24ರಂದು ನನ್ನ ಜನ್ಮದಿನ. ಅಂದಿನಿಂದ ಕ್ಷೇತ್ರದ ಪ್ರತಿ ಹಳ್ಳಿಗೆ ಪಾದಯಾತ್ರೆಯ ಮೂಲಕ ತೆರಳಿ ನನ್ನ ತಪ್ಪುಗಳಿಗಾಗಿ ಕ್ಷಮೆ ಕೋರುತ್ತೇನೆ. ಪಾದಯಾತ್ರೆಯಲ್ಲಿ ಹಳ್ಳಿಗಳಲ್ಲೇ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಈ ಸಂಕಲ್ಪ ಯಾವುದೇ ಚುನಾವಣಾ ದೃಷ್ಟಿಯಿಂದ ಅಲ್ಲ. ಕೇವಲ ನನ್ನ ಆತ್ಮಾವಲೋಕನ ಮಾತ್ರ" ಎಂದು ಘೋಷಣೆ ಮಾಡಿದರು.
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, "ಕಡೂರು ನನ್ನ ರಾಜಕೀಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಾಗಾಗಿ ನಾನಾಗಲಿ ಅಥವಾ ನಮ್ಮ ಕುಟುಂಬವಾಗಲಿ ಈ ಕ್ಷೇತ್ರವನ್ನು ಮರೆಯಲು ಸಾಧ್ಯವಿಲ್ಲ. ಕೆಲವು ತಪ್ಪುಗಳಾಗಿವೆ. ನಾನೂ ಸಹ ಈ ಭಾಗಕ್ಕೆ ಬಾರದಿರುವುದು ಒಂದಿಷ್ಟು ಹಿನ್ನಡೆಗೆ ಕಾರಣವಾಗಿದೆ" ಎಂದರು.