ಚಿಕ್ಕಮಗಳೂರು :ಗಣಿತದ ವಿಷಯವನ್ನು ಮಕ್ಕಳಿಗೆ ಅರ್ಥ ಮಾಡಿಸುವುದರಲ್ಲಿ ಕಡೂರಿನ ಮಾಜಿ ಶಾಸಕ ವೈಎಸ್ವಿ ದತ್ತಾ ಎತ್ತಿದ ಕೈ, ರಾಜಕೀಯ, ಮಕ್ಕಳಿಗೆ ಪಾಠ, ಕುಮಾರವ್ಯಾಸನ ಪ್ರವಚನದ ಮೂಲಕ ಸಾಕಷ್ಟು ಹೆಸರುವಾಸಿಯಾಗಿರುವ ವೈಎಸ್ವಿ ದತ್ತಾ ಇದೀಗ ಗ್ರಾಮೀಣ ಪ್ರದೇಶದಲ್ಲಿ ಹಳ್ಳಿ ವಾದ್ಯಕ್ಕೆ ಹೆಜ್ಜೆ ಹಾಕಿ ನೃತ್ಯಕ್ಕೂ ಸೈ ಎನಿಸಿಕೊಂಡಿದ್ದಾರೆ.
ಕಡೂರಿನ ಬಿದಿರೆ ಕರಾಳಮ್ಮ ದೇವಿ ಜಾತ್ರೆಯಲ್ಲಿ ಹೆಜ್ಜೆ ಹಾಕಿದ ವೈಎಸ್ವಿ ದತ್ತಾ.. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಿದಿರೆ ಗ್ರಾಮದಲ್ಲಿ ಪ್ರತಿ ವರ್ಷ ಕರಾಳಮ್ಮದೇವಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ವರ್ಷವೂ ಕೂಡ ಗ್ರಾಮದಲ್ಲಿ ವಿಜೃಂಭಣೆಯಾಗಿ ಜಾತ್ರಾ ಮಹೋತ್ಸವ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ಕಡೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದೇವೇಗೌಡರ ಮಾನಸಪುತ್ರ ವೈಎಸ್ವಿ ದತ್ತಾ ಪಾಲ್ಗೊಂಡು, ಹಳ್ಳಿ ವಾದ್ಯಕ್ಕೆ ಹೆಜ್ಜೆ ಹಾಕಿದರು.
ಈ ಹಿಂದೆ ಲಾಕ್ಡೌನ್ನಲ್ಲಿ ಮಕ್ಕಳಿಗೆ ಗಣಿತ ಪಾಠ ಮಾಡುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದರು. ಜೊತೆಗೆ ಸ್ವಗ್ರಾಮ ಯುಗಟಿಯಲ್ಲಿ ಪ್ರತಿವರ್ಷವೂ ನಡೆಯುವ ಕುಮಾರವ್ಯಾಸನ ಜಯಂತಿ ಸಮಯದಲ್ಲಿ ಪ್ರವಚನವನ್ನು ಮಾಡುವುದರಲ್ಲೂ ಪ್ರಸಿದ್ದಿ. ಇದೀಗ ಬಿದಿರೆ ಗ್ರಾಮದ ಜಾತ್ರೆಯಲ್ಲಿ ಕುಣಿತಕ್ಕೂ ಸೈ ಎನಿಸಿಕೊಂಡಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ನೃತ್ಯವಾದ ಮಣೇವು ಕುಣಿತಕ್ಕೆ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ತಮಟೆ ಸದ್ದಿಗೆ ಹಳ್ಳಿಗರೊಂದಿಗೆ ವೈಎಸ್ವಿ ದತ್ತಾ ಕೂಡ ಹೆಜ್ಜೆ ಹಾಕಿದರು. ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಜಾತ್ರೆ ಮಹೋತ್ಸವಗಳು ನಡೆಯುವ ಸಮಯದಲ್ಲಿ ಗ್ರಾಮದಲ್ಲಿ ದೇವರ ಮೂರ್ತಿಗಳ ಮೆರವಣಿಗೆ ನಡೆಯುತ್ತದೆ.
ಆ ವೇಳೆಯಲ್ಲಿ ದೇವರ ಮೂರ್ತಿಗಳ ಅಡ್ಡೆ ಮುಂದೆ ಮಣೇವು ಕುಣಿತವನ್ನು ಕುಣಿಯುವ ಪದ್ಧತಿ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. ಅದೇ ರೀತಿ ಬಿದಿರೆ ಗ್ರಾಮದಲ್ಲಿ ಕರಾಳಮ್ಮ ದೇವಿಯ ಅಡ್ಡೆಯ ಮುಂದೆ ವೈಎಸ್ವಿ ದತ್ತಾ ಮಣೇವು ಕುಣಿತಕ್ಕೆ ಹೆಜ್ಜೆ ಹಾಕಿದ್ದಾರೆ. ಮಣೇವು ಕುಣಿತ ಆರಂಭ ಸಂಪನ್ನದ ಮುನ್ನ ದೇವರ ಅಡ್ಡೆಗೆ ದತ್ತಾ ನಮ್ಮಸ್ಕರಿಸಿದರು. ಪ್ರತಿವರ್ಷ ನಡೆಯುವಂತಹ ಜಾತ್ರಾ ಮಹೋತ್ಸವದಲ್ಲಿ ವೈಎಸ್ವಿ ದತ್ತಾ ಪಾಲ್ಗೊಂಡು ಮಣೇವು ಕುಣಿತಕ್ಕೆ ಹೆಜ್ಜೆ ಹಾಕುತ್ತಾರೆ.